ಬೆಂಗಳೂರು ಶಿಕ್ಷಕರ, ಆಗ್ನೇಯ ಪದವೀಧರ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಆರಂಭ
ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಆಗ್ನೇಯ ಪದವೀಧರರ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯು ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಇಂದು ಬೆಳಗ್ಗೆ 8ಕ್ಕೆ ಆರಂಭಗೊಂಡಿದೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಇರುವ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಪುಟ್ಟಣ್ಣ, ಎನ್ಡಿಎ ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್ ಸೇರಿದಂತೆ ಒಟ್ಟು ಆರು ಅಭ್ಯರ್ಥಿಗಳು ಹಾಗೂ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಶಶಿ ಹುಲಿಕುಂಟೆ ಮಠ್, ಬಿಜೆಪಿಯಿಂದ ಕೆ.ಎಂ.ಸುರೇಶ್ ಸೇರಿದಂತೆ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿ ಇವರ ಭವಿಷ್ಯ ಇಂದು ಸಂಜೆಯ ಒಳಗೆ ನಿರ್ಧಾರವಾಗಲಿದೆ.
ನಾಲ್ಕು ಕ್ಷೇತ್ರ, 43 ಅಭ್ಯರ್ಥಿಗಳು
ಕರ್ನಾಟಕ ವಿಧಾನ ಪರಿಷತ್ ನ ಎರಡು ಪದವೀಧರ, ಎರಡು ಶಿಕ್ಷಕರ ಕ್ಷೇತ್ರ ಸೇರಿ ಒಟ್ಟು ನಾಲ್ಕು ಕ್ಷೇತ್ರಗಳಿಗೆ ಅ.23ರಂದು ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.
ವಿಧಾನ ಪರಿಷತ್ತಿನ ಈ ನಾಲ್ಕು ಕ್ಷೇತ್ರಗಳ ಪೈಕಿ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆರು ಅಭ್ಯರ್ಥಿಗಳು ಹಾಗೂ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಸೇರಿ ಒಟ್ಟು 43 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆ ಧಾರವಾಡದಲ್ಲಿ, ಈಶಾನ್ಯ ಶಿಕ್ಷಕರ ಕ್ಷೇತ್ರದ ಮತಗಳ ಎಣಿಕೆ ಕಲಬುರಗಿಯಲ್ಲಿ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಆಗ್ನೇಯ ಪದವೀಧರರ ಕ್ಷೇತ್ರದ ಮತ ಎಣಿಕೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಒಟ್ಟು 43 ಅಭ್ಯರ್ಥಿಗಳ ಪೈಕಿ 'ಮೇಲ್ಮನೆ' ಪ್ರವೇಶಿಸುವ ನಾಲ್ವರು ಯಾರೆಂಬ ಕುತೂಹಲಕ್ಕೆ ಇಂದು ಸಂಜೆಯೊಳಗೆ ತೆರೆ ಬೀಳಲಿದೆ.