ಬೆಂಗಳೂರು:  ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ಉದ್ದೇಶದಿಂದ ವಿಡಿಯೊ ಸೃಷ್ಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸಾಮಾಜಿಕ ಜಾಲತಾಣ ಘಟಕದ ಮೋಹನ್ ಗೌಡ ಅವರ ಮನೆಗೆ ಪರಿಶೀಲನೆಗೆ ತೆರಳಿದ್ದ ಸಿಸಿಬಿ ಇನ್ಸ್ಪೆಕ್ಟರ್ ಒಬ್ಬರ ಚಿನ್ನದ ಚೈನ್ ನಾಪತ್ತೆಯಾಗಿದೆ. ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಸೋಮವಾರ ಮೋಹನ್ ಗೌಡ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಇನ್ಸ್‌ಪೆಕ್ಟರ್‌ಗಳಾದ ಮುಕಾರಾಮ್ ಮತ್ತು ಕವಿತಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಮೋಹನ್ ಗೌಡ ಅವರ ಪತ್ನಿ ಪವಿತ್ರಾ ಅವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಕವಿತಾ ಮತ್ತು ಪವಿತ್ರಾ ನಡುವೆ ನೂಕಾಟ, ತಳ್ಳಾಟ ನಡೆದಿದೆ ಎನ್ನಲಾಗಿದೆ.

ಈ ವೇಳೆ ಕವಿತಾ ಅವರ ಕೈಯಲ್ಲಿದ್ದ ಒಂಬತ್ತು ಗ್ರಾಂ ತೂಕದ ಚಿನ್ನದ ಚೈನ್ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ. ದಾಳಿ ಮುಗಿಸಿ ಠಾಣೆಗೆ ಮರಳಿದ ಬಳಿಕ ಸರ ಇಲ್ಲದಿರುವುದು ಅವರ ಗಮನಕ್ಕೆ ಬಂದಿದೆ. ಬಳಿಕ ಪರಿಶೀಲನೆ ನಡೆಸಿದರೂ ಸರ ಪತ್ತೆಯಾಗಿಲ್ಲ ಎನ್ನಲಾಗಿದೆ.

ಈ ಸಂಬಂಧ ಸಿಸಿಬಿ ಪೊಲೀಸರು ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹಾಗೂ ಚಿನ್ನದ ಚೈನ್ ನಾಪತ್ತೆ ಕುರಿತು ಪ್ರಕರಣ ದಾಖಲಾಗಿದೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor