ಬೆಂಗಳೂರು: ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರರ ಕ್ಷೇತ್ರದ ದೈವಾರ್ಷಿಕ ಚುನಾವಣೆಯ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅ.21ರ ಸಂಜೆ 4ರಿಂದ ಅ.23ರ ಸಂಜೆ 4ರವರೆಗೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ಅವಧಿಯಲ್ಲಿ ಮದ್ಯದ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು, ವೈನ್ ಶಾಪ್‌ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಹಾಗೂ ಇತರ ಮದ್ಯ ಮಾರಾಟ ಕೇಂದ್ರಗಳಲ್ಲಿ ಮದ್ಯ ಮಾರಾಟ, ಪೂರೈಕೆ ಮತ್ತು ಸೇವನೆಗೆ ಅವಕಾಶವಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಖಾಸಗಿ ಸ್ಥಳಗಳಲ್ಲಿಯೂ ಮದ್ಯ ಸಂಗ್ರಹಣೆ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. ಆದರೆ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಪೂರೈಕೆಗೆ ವಿನಾಯಿತಿ ನೀಡಲಾಗಿದೆ.

ಮದ್ಯ ಮಾರಾಟ ನಿಷೇಧವು ನಗರದ ವಿವಿಧ ಪೊಲೀಸ್ ವಿಭಾಗಗಳ ವ್ಯಾಪ್ತಿಯ ಆಯ್ದ ಠಾಣೆಗಳಿಗೆ ಅನ್ವಯಿಸಲಿದೆ. ಕೇಂದ್ರ ವಿಭಾಗದ ಹೈಗ್ರೌಂಡ್ಸ್, ಕಬ್ಬನ್ ಪಾರ್ಕ್ ಮತ್ತು ಶೇಷಾದ್ರಿಪುರಂ; ಪೂರ್ವ ವಿಭಾಗದ ಪುಲಕೇಶಿನಗರ ಮತ್ತು ಗೋವಿಂದಪುರ; ಪಶ್ಚಿಮ ವಿಭಾಗದ ಚಾಮರಾಜಪೇಟೆ, ವಿಜಯನಗರ, ಗೋವಿಂದರಾಜನಗರ ಮತ್ತು ಅನ್ನಪೂರ್ಣೇಶ್ವರಿನಗರ; ಉತ್ತರ ವಿಭಾಗದ ರಾಜಾಜಿನಗರ, ಮಲ್ಲೇಶ್ವರಂ, ಸುಬ್ರಹ್ಮಣ್ಯ ನಗರ ಮತ್ತು ಹೆಬ್ಬಾಳ; ದಕ್ಷಿಣ ವಿಭಾಗದ ವಿ.ವಿ. ಪುರಂ, ಹನುಮಂತನಗರ ಮತ್ತು ಜಯನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಯಲ್ಲಿರಲಿದೆ.

ಅದೇ ರೀತಿ, ಆಗ್ನೇಯ ವಿಭಾಗದ ಕೋರಮಂಗಲ ಮತ್ತು ಎಚ್‌ಎಸ್‌ಆರ್ ಬಡಾವಣೆ; ನೈಋತ್ಯ ವಿಭಾಗದ ಕೆಂಗೇರಿ, ಸುಬ್ರಹ್ಮಣ್ಯಪುರ ಮತ್ತು ಕೋಣನಕುಂಟೆ; ವಾಯವ್ಯ ವಿಭಾಗದ ಬ್ಯಾಡರಹಳ್ಳಿ ಮತ್ತು ಬಾಗಲಗುಂಟೆ; ಈಶಾನ್ಯ ವಿಭಾಗದ ದೇವನಹಳ್ಳಿ, ಅಮೃತಹಳ್ಳಿ ಮತ್ತು ಯಲಹಂಕ; ವೈಟ್‌ಫೀಲ್ಡ್ ವಿಭಾಗದ ಕೆ.ಆರ್. ಪುರ ಹಾಗೂ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಎಲೆಕ್ಟ್ರಾನಿಕ್ ಸಿಟಿ ಮತ್ತು ಬೇಗೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿಯೂ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಮತ ಎಣಿಕೆ ನಡೆಯಲಿರುವ ಅ.27ರಂದು ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ಕೇಂದ್ರ ವಿಭಾಗದ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor