ಡಿ.ಕೆ.ಶಿವಕುಮಾರ್

ಬೆಂಗಳೂರು : ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಎಲ್ಲರೂ ಒಗ್ಗಟ್ಟಾಗಿ ಸೇರಿ ಬಗೆಹರಿಸಬೇಕು. ಇದು ಯಾರೊಬ್ಬರ ಜವಾಬ್ದಾರಿಯಲ್ಲ, ಎಲ್ಲರ ಜವಾಬ್ದಾರಿಯಾಗಿದೆ. ಈ ವಿಚಾರದಲ್ಲಿ ಒಬ್ಬರ ಮೇಲೆಯೇ ಹೊರೆ ಹಾಕಲು ನಾನು ಇಷ್ಟಪಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರು ಕಬ್ಬು ಬೆಳೆದರೆ ಸಕ್ಕರೆ ಕಾರ್ಖಾನೆಗಳು ನಡೆಯುತ್ತವೆ. ಅದೇ ರೀತಿ ಕಾರ್ಖಾನೆಗಳು ನಷ್ಟವಾಗದಂತೆ ಕಬ್ಬು ಅರೆಯಬೇಕಿದೆ. ಆಗ ರೈತರು ಮತ್ತು ಕಾರ್ಖಾನೆಗಳೆರಡೂ ಉಳಿಯಲು ಸಾಧ್ಯವಾಗುತ್ತದೆ ಎಂದರು.

“ಇದು ಎಲ್ಲರ ಬದುಕಿನ ಪ್ರಶ್ನೆ. ರೈತರು, ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳೇನು ಎಂಬುದನ್ನು ಒಟ್ಟಾಗಿ ಚರ್ಚಿಸಬೇಕಿದೆ” ಎಂದು ಹೇಳಿದರು.

“ಬರ ಪರಿಹಾರದ ವಿಚಾರವಾಗಿ ಚರ್ಚಿಸಲು ಕೇಂದ್ರ ಸರ್ಕಾರದ ಬಳಿ ಸಮಯ ಕೇಳಿದ್ದೇನೆ. ಆದರೆ, ಇನ್ನೂ ಸಮಯ ನಿಗದಿಯಾಗಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸುವ ವಿಚಾರವನ್ನು ಜನಪ್ರತಿನಿಧಿಗಳಿಗೆ ತಿಳಿಸಿದ್ದೇನೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ರೈತರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಬೇಕಿದೆ. ಕೇಂದ್ರ ಸಚಿವರೊಂದಿಗೂ ಮಾತನಾಡುತ್ತೇನೆ. ಅವರೂ ತಮ್ಮ ಕೈಲಾದಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಸಮಸ್ಯೆಯನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಬಗೆಹರಿಸಬೇಕಿದೆ” ಎಂದರು.

ಸಭೆ ನಡೆಸಲು ಎಲ್ಲರಿಗೂ ಅನುಕೂಲವಾಗುವ ದಿನಾಂಕವನ್ನು ನಿಗದಿಪಡಿಸಲಾಗುವುದು. ಬೆಳಗಾವಿಯಲ್ಲಿ ರೈತರಿಗೆ ಮಾತು ಕೊಟ್ಟು ಬಂದಿದ್ದೇನೆ. ಸಭೆಗೆ ಕೇಂದ್ರ ಸಚಿವರು, ಸಂಸದರು ಹಾಗೂ ಆ ಭಾಗದ ಸಚಿವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತೆಗೆ ಸಚಿವರಿಗೆ ಸೂಚನೆ :

ಸಚಿವರೊಂದಿಗೆ ಸೋಮವಾರ ಸಭೆ ನಡೆಸಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬೇಕಿದೆ. ಚುನಾವಣಾ ಆಯೋಗವು ಅ. 27ರಂದು ಹೊಸ ಮತದಾರರ ಪಟ್ಟಿಯನ್ನು ನೀಡಲಿದೆ. ಡಿ.31ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಬೆಂಗಳೂರು ನಗರದಲ್ಲಿಯೂ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಚುನಾವಣಾ ಆಯೋಗ ಯಾವಾಗ ಬೇಕಾದರೂ ಚುನಾವಣೆ ಘೋಷಿಸಬಹುದು. ಹೀಗಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವರಿಗೆ ಸೂಚಿಸಿದ್ದೇನೆ ಎಂದರು.

ಪಂಚಾಯಿತಿ ಮಟ್ಟದಲ್ಲಿ ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಅನುದಾನ ನೀಡುವ ಕುರಿತು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅನುದಾನಕ್ಕಾಗಿ ವರದಿ ಸಲ್ಲಿಸುವಂತೆ ಶಾಸಕರಿಗೆ ತಿಳಿಸಿದ್ದೇನೆ. ಅವರಿಗೆ ಕರೆ ಮಾಡಿ ಹಬ್ಬದ ಶುಭಾಶಯಗಳನ್ನೂ ಕೋರಿದ್ದೇನೆ. ಅನುದಾನದ ವಿಚಾರವಾಗಿ ಬೆಂಗಳೂರು ಶಾಸಕರನ್ನು ಕರೆದು ಮಾತನಾಡಿದ್ದೇನೆ ಎಂದು ಹೇಳಿದರು.

ರಾಜ್ಯದ ಸಮಸ್ತ ಜನತೆಗೆ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದ ಮುಖ್ಯಮಂತ್ರಿ, ನಾಡಿನ ಜನರಿಗೆ ಒಳಿತಾಗಲಿ ಎಂದು ಹಾರೈಸಿದರು.

ರೈತರು, ಕಾರ್ಮಿಕರು ಹಾಗೂ ಶ್ರಮಿಕ ವರ್ಗದವರು ತಮ್ಮ ಕೆಲಸದ ಪರಿಕರಗಳಿಗೆ ಪೂಜೆ ಸಲ್ಲಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ವಾಹನಗಳಿಗೂ ಪೂಜೆ ಸಲ್ಲಿಸಲಾಗಿದೆ. ಎಲ್ಲರ ಪ್ರಯಾಣ ಸುಖಕರವಾಗಿ ಹಾಗೂ ಸುರಕ್ಷಿತವಾಗಿರಲಿ. ಚಾಮುಂಡೇಶ್ವರಿಯ ಆಶೀರ್ವಾದ ಮತ್ತು ಅನುಗ್ರಹ ಎಲ್ಲರಿಗೂ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor