ಬಿ.ವೈ.ವಿಜಯೇಂದ್ರ

ಬೆಂಗಳೂರು: ದೇಶದಲ್ಲಿ ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಟ್ಟಿದ್ದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ. ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಕನಿಷ್ಠ ಎಂಎಸ್‌ಪಿ ವ್ಯವಸ್ಥೆ ಜಾರಿಗೆ ತಂದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಥೆನಾಲ್ ಉತ್ಪಾದನೆಗೆ ಮೋದಿ ಅವರು ಅವಕಾಶ ಕಲ್ಪಿಸಿದರು. ಕಬ್ಬು ಅರೆಯುವ ಕಾರ್ಖಾನೆಗಳಿಗೆ ಅನುಕೂಲವಾಗುವ ನೀತಿಗಳನ್ನು ಜಾರಿಗೆ ತಂದರು. ಹಣಕಾಸಿನ ನೆರವು ಸೇರಿದಂತೆ ಹಲವು ರೀತಿಯಲ್ಲಿ ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡಿಕೊಟ್ಟರು ಎಂದು ಹೇಳಿದರು.

ಕಬ್ಬು ಬೆಳೆಗಾರರ ಹಲವು ದೂರುಗಳಲ್ಲಿ ಕಾರ್ಖಾನೆಗಳಲ್ಲಿ ಸರಿಯಾಗಿ ತೂಕ ಮಾಡುತ್ತಿಲ್ಲ ಎಂಬುದು ಪ್ರಮುಖವಾಗಿದೆ. ಕಬ್ಬಿನ ರಿಕವರಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆಗಳು ನಡೆಯುತ್ತಿವೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಈಗಾಗಲೇ ಈ ಕುರಿತು ಸಮಿತಿ ರಚಿಸಿದ್ದು, ಆ ಸಮಿತಿ ರಾಜ್ಯಕ್ಕೆ ಭೇಟಿ ನೀಡುತ್ತಿದೆ ಎಂದರು.

ಕಬ್ಬು ಬೆಳೆಗಾರರ ಸಮಸ್ಯೆ ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನ ಹರಿಸಿದೆ ಎಂದು ಅವರು ವಿವರಿಸಿದರು.

ಕೇಂದ್ರ ಸರ್ಕಾರವನ್ನು ದೂರುವುದೇ ಕೆಲಸವಾಗಿದೆ :

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬುಡ ಅಲ್ಲಾಡುತ್ತಿದೆ. ಅವರದೇ ಶಾಸಕರು ದಂಗೆ ಏಳುವ ಸ್ಥಿತಿಗೆ ಬಂದಿದ್ದಾರೆ. ಹತಾಶರಾಗಿರುವ ಅವರು ಪದೇಪದೇ ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.

ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನೂ ಸಮರ್ಪಕವಾಗಿ ನಿರ್ವಹಿಸಲಿಲ್ಲ. ಅಭಿವೃದ್ಧಿಯೂ ಸ್ಥಗಿತಗೊಂಡಿದೆ. ಎಲ್ಲದಕ್ಕೂ ಪ್ರತಿಭಟನೆಗಳು ನಡೆಯುತ್ತಿವೆ. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ. ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವ ಕುರಿತು ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

ಬಸನಗೌಡ ಪಾಟೀಲ್ ಜತೆಗಿನ ಭೇಟಿ ಅನಿರೀಕ್ಷಿತ :

ಬಸನಗೌಡ ಪಾಟೀಲ್ ಅವರೊಂದಿಗಿನ ಭೇಟಿ ಅನಿರೀಕ್ಷಿತವಾಗಿ ನಡೆಯಿತು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆವು. ಮುಂದೇನಾಗಲಿದೆ ಎಂಬುದನ್ನು ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಈಗ ವಿರೋಧ ಪಕ್ಷದಲ್ಲಿದೆ. ಜನರು ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಉಳಿದ ಅವಧಿಯಲ್ಲಿಯೂ ನಾವು ವಿರೋಧ ಪಕ್ಷದಲ್ಲೇ ಇರುತ್ತೇವೆ. ಕಾಂಗ್ರೆಸ್ ಪಕ್ಷವನ್ನು ಅಲುಗಾಡಿಸಿ ಮುಖ್ಯಮಂತ್ರಿಯನ್ನು ಕೆಳಗಿಳಿಸುವ ಅಗತ್ಯ ನಮಗಿಲ್ಲ. ಮೂರನೇ ಮುಖ್ಯಮಂತ್ರಿ ವಿಚಾರದ ಬಗ್ಗೆ ಸದ್ಯದಲ್ಲೇ ತಿಳಿಯಲಿದೆ ಎಂದು ವಿಜಯೇಂದ್ರ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor