×
Ad

ಬೆಂಗಳೂರು | ಕಲಾಸಿಪಾಳ್ಯದಲ್ಲಿ ಸ್ಫೋಟಕ ಪತ್ತೆ ಪ್ರಕರಣ: ಮೂವರ ಬಂಧನ

Update: 2025-07-29 16:14 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಜಿಲೆಟಿನ್ ಹಾಗೂ ಡಿಟೊನೇಟರ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗಣೇಶ್, ಶಿವ ಹಾಗೂ ಮುನಿಯಪ್ಪ ಬಂಧಿತ ಆರೋಪಿಗಳು.

ಜು.23ರಂದು ಮಧ್ಯಾಹ್ನ ಕಲಾಸಿಪಾಳ್ಯದ ಶೌಚಾಲಯದ ಬಳಿ 6 (ಆರ್.ಇ.ಎಕ್ಸ್ - 90) ಜಿಲೆಟಿನ್ ಜೆಲ್, 12 ಇಲೆಕ್ಟ್ರಿಕ್ ಡಿಟೋನೇಟರ್ಗಳು ಪತ್ತೆಯಾಗಿದ್ದವು. ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಆರೋಪಿಗಳ ಪತ್ತೆಗಾಗಿ ಐದು ಪ್ರತ್ಯೇಕ ತಂಡಗಳನ್ನ ರಚಿಸಲಾಗಿತ್ತು.

'ಬೋರ್ ವೆಲ್ ಕಾಮಗಾರಿಗಾಗಿ ಕೋಲಾರದಿಂದ ಸ್ಫೋಟಕಗಳನ್ನ ಖರೀದಿಸಿ ತರಲಾಗಿತ್ತು. ಚಾಮರಾಜನಗರದ ಕೊಳ್ಳೆಗಾಲಕ್ಕೆ ಕೊಂಡೊಯ್ಯುತ್ತಿದ್ದ ಆರೋಪಿಗಳು ಶೌಚಾಲಯಕ್ಕೆ ಹೋಗಿ ವಾಪಸ್ ಬರುವಷ್ಟರಲ್ಲಿ ಪೊಲೀಸರು ಬ್ಯಾಗ್ಗಳನ್ನ ತಪಾಸಣೆಗೊಳಪಡಿಸುತ್ತಿದ್ದರು. ಅದರಿಂದ ಗಾಬರಿಯಾಗಿ ಬ್ಯಾಗ್ ಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದುದಾಗಿ ತನಿಖೆಯ ಸಂದರ್ಭದಲ್ಲಿ ಆರೋಪಿಗಳು ತಿಳಿಸಿದ್ದಾರೆ' ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕಲ್ಲು ಗಣಿಗಾರಿಕೆ, ಬೋರ್ ವೆಲ್ ಕಾಮಗಾರಿ ವೇಳೆ ಸ್ಫೋಟಕಗಳನ್ನ ಬಳಸಲು ಕೆಲವು ನಿಬಂಧನೆಗಳಿವೆ. ಪರವಾನಿಗೆ ಇಲ್ಲದೇ ಬಳಸುವಂತಿಲ್ಲ. ಆದರೆ ಆರೋಪಿಗಳು ಯಾವುದೇ ನಿಯಮ ಪಾಲಿಸದೇ, ಸೂಕ್ತ ಸಂಗ್ರಹ ವ್ಯವಸ್ಥೆ ಹೊಂದಿಲ್ಲ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 22 ಜೀವಂತ (ಆರ್.ಇ.ಎಕ್ಸ್-90) ಜಿಲೆಟಿನ್ ಕಡ್ಡಿಗಳು ಹಾಗೂ 30 ಇಲೆಕ್ಟ್ರಿಕ್ ಡಿಟೋನೇಟರ್ಗಳನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಗೂ ಬಲೆ ಬೀಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News