ಸುರಕ್ಷಿತ ಆಹಾರ ಮತ್ತು ಗುಣಮಟ್ಟದ ಔಷಧ ಪಡೆಯುವುದು ನಾಗರಿಕರ ಹಕ್ಕು : ಯು.ಟಿ.ಖಾದರ್
ಬೆಂಗಳೂರು : ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಸುರಕ್ಷಿತ ಆಹಾರ ಮತ್ತು ಗುಣಮಟ್ಟದ ಔಷಧಗಳನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಇದನ್ನು ಖಚಿತಪಡಿಸುವುದು ಪ್ರತಿಯೊಂದು ಸರಕಾರಗಳ ಜಂಟಿ ಜವಾಬ್ದಾರಿಯಾಗಿರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ಗುರುವಾರ ನಗರದಲ್ಲಿ ನಡೆದ ‘ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಕುರಿತ ರಾಷ್ಟ್ರೀಯ ಸಮ್ಮೇಳನ'ದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಆಯುಕ್ತರು, ಹಿರಿಯ ಅಧಿಕಾರಿಗಳು ಮತ್ತು ಪ್ರತಿನಿಧಿಗಳನ್ನು ಸ್ವಾಗತಿಸುವ ಹಾಗೂ ಭಾರತದ ಆಹಾರ ಮತ್ತು ಔಷಧ ಸುರಕ್ಷತಾ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಅವರು ಮಾತನಾಡಿದರು.
ಆಹಾರ ಉತ್ಪನ್ನಗಳು ಮತ್ತು ಔಷಧಗಳು ಅಂತರ್ರಾಜ್ಯ ಗಡಿಗಳನ್ನು ದಾಟಿ ಸಾಗುವುದರಿಂದ, ನಿಯಂತ್ರಣಾ ಸವಾಲುಗಳನ್ನು ಪ್ರತ್ಯೇಕವಾಗಿ ಎದುರಿಸಲು ಸಾಧ್ಯವಿಲ್ಲ. ಪ್ರತಿಯೊಂದು ಹಂತದಲ್ಲೂ ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಲು ಬಲವಾದ ಅಂತರ್ರಾಜ್ಯ ಸಮನ್ವಯ, ನೈಜ-ಸಮಯದ ಮಾಹಿತಿ ಹಂಚಿಕೆ, ಏಕರೂಪದ ಮಾನದಂಡಗಳು ಮತ್ತು ಸ್ಪಷ್ಟ ರಾಷ್ಟ್ರೀಯ ಮಾರ್ಗಸೂಚಿಗಳ ಅಗತ್ಯವಿದೆ ಎಂದು ಖಾದರ್ ಪ್ರತಿಪಾದಿಸಿದರು.
ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮ: ನಕಲಿ ಔಷಧಗಳು, ಆಹಾರ ಕಲಬೆರಕೆ ಮತ್ತು ಇತರ ಗಂಭೀರ ಉಲ್ಲಂಘನೆಗಳ ವಿರುದ್ಧ ಕರ್ನಾಟಕವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಸುಮಾರು 5 ಕೋಟಿ ರೂ. ಮೌಲ್ಯದ ಮತ್ತು 18 ಕೋಟಿ ರೂ.ಗಳಿಗೂ ಅಧಿಕ ಹಣಕಾಸಿನ ವಹಿವಾಟಿನ ಜಾಡು ಹೊಂದಿರುವ ನಕಲಿ ಔಷಧ ಜಾಲದ ಕುರಿತು ನಡೆಯುತ್ತಿರುವ ಎಸ್ಐಟಿ ತನಿಖೆಯು, ಕಠಿಣ ಜಾರಿ ಮತ್ತು ಸಂಘಟಿತ ಕ್ರಮದ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.
ಜವಾಬ್ದಾರಿಯುತ ನಿಯಂತ್ರಣ: ನಿಯಂತ್ರಣವು ಕೇವಲ ದಂಡನಾತ್ಮಕ ಕ್ರಮಗಳಿಗೆ ಸೀಮಿತವಾಗಬಾರದು. ನಾವು ಜಾಗೃತಿ ಮೂಡಿಸಬೇಕು, ನ್ಯೂನತೆಗಳನ್ನು ಗುರುತಿಸಬೇಕು ಮತ್ತು ನಿಯಮಗಳನ್ನು ಪಾಲಿಸುವಂತೆ ಆಹಾರ ಉದ್ಯಮಗಳಿಗೆ ಮಾರ್ಗದರ್ಶನ ನೀಡಬೇಕು. ಆದರೆ, ಉದ್ದೇಶಪೂರ್ವಕವಾಗಿ ಸಾರ್ವಜನಿಕ ಆರೋಗ್ಯದೊಂದಿಗೆ ಚೆಲ್ಲಾಟವಾಡುವವರ ವಿರುದ್ಧ ಯಾವುದೇ ವಿನಾಯಿತಿಯಿಲ್ಲದೆ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಖಾದರ್ ತಿಳಿಸಿದರು.
ಏಕರೂಪದ ರಾಷ್ಟ್ರೀಯ ಮಾನದಂಡಗಳು: ಮರುಬಳಕೆ ಮಾಡಿದ ಅಡುಗೆ ಎಣ್ಣೆ, ಆಹಾರದ ಗುಣಮಟ್ಟ, ರಫ್ತು ಮತ್ತು ಕಳಪೆ ಗುಣಮಟ್ಟದ ಔಷಧಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಷ್ಟ ಮಾರ್ಗಸೂಚಿಗಳು ಹಾಗೂ ರಾಜ್ಯ ಮತ್ತು ಕೇಂದ್ರ ಪ್ರಾಧಿಕಾರಗಳ ನಡುವೆ ಉತ್ತಮ ಸಮನ್ವಯದ ಅಗತ್ಯವಿದೆ. ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಎದುರಾದಾಗ ಸಕಾಲಿಕ ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಅಗತ್ಯವಿರುವ ಅಧಿಕಾರವೂ ಇರಬೇಕು ಎಂದು ಅವರು ಹೇಳಿದರು.
ಹೆಚ್ಚಿನ ನಾಗರಿಕರ ಸಹಭಾಗಿತ್ವ: ಕರ್ನಾಟಕದ ಕ್ಯೂಆರ್-ಕೋಡ್ ಆಧಾರಿತ ದೂರು ವ್ಯವಸ್ಥೆಯು, ನಾಗರಿಕರು ಆಹಾರ ಸುರಕ್ಷತಾ ಉಲ್ಲಂಘನೆಗಳನ್ನು (ಫೋಟೋಗಳ ಸಹಿತ) ತ್ವರಿತ ತಪಾಸಣೆ ಮತ್ತು ಮುಂದಿನ ಕ್ರಮಕ್ಕಾಗಿ ನೇರವಾಗಿ ಕ್ಷೇತ್ರಾಧಿಕಾರಿಗಳಿಗೆ ವರದಿ ಮಾಡಲು ಅನುವು ಮಾಡಿಕೊಡುತ್ತದೆ. ಆಹಾರದ ಗುಣಮಟ್ಟ ಹಾಗೂ ಸಕ್ಕರೆ ಮತ್ತು ಉಪ್ಪಿನ ಅತಿಯಾದ ಸೇವನೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಸಹ ಅಷ್ಟೇ ಮುಖ್ಯವಾಗಿದೆ ಎಂದು ಖಾದರ್ ತಿಳಿಸಿದರು.
ಬಲವಾದ ಸಾಂಸ್ಥಿಕ ಸಮನ್ವಯ: ನಿಯಮಿತ ಮೇಲ್ವಿಚಾರಣೆ, ಹೊಣೆಗಾರಿಕೆ ಮತ್ತು ಸಂಘಟಿತ ಕ್ರಮವನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮಟ್ಟದಲ್ಲಿ ತ್ರೈಮಾಸಿಕ ಪರಿಶೀಲನಾ ಸಭೆಗಳನ್ನು ಮತ್ತು ದೆಹಲಿಯಲ್ಲಿ ಆರೋಗ್ಯ ಸಚಿವರು ಹಾಗೂ ಆಹಾರ ಆಯುಕ್ತರ ರಾಷ್ಟ್ರೀಯ ಮಟ್ಟದ ಸಭೆಯನ್ನು ನಡೆಸುವಂತೆ ಅವರು ಪ್ರಸ್ತಾಪಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ, ಇತರ ರಾಜ್ಯಗಳಿಗೆ ಮಾದರಿಯಾಗಬಲ್ಲಂತಹ ಬಲಿಷ್ಠ, ಪಾರದರ್ಶಕ ಮತ್ತು ಸ್ಪಂದನಶೀಲ ಆಹಾರ ಮತ್ತು ಔಷಧ ಸುರಕ್ಷತಾ ನಿಯಂತ್ರಣ ವ್ಯವಸ್ಥೆಯನ್ನು ನಿರ್ಮಿಸಲು ಕರ್ನಾಟಕ ಬದ್ಧವಾಗಿದೆ. ಆಹಾರ ಸುರಕ್ಷತೆಯು ಕೇವಲ ನಿಯಂತ್ರಣಾ ಜವಾಬ್ದಾರಿಯಲ್ಲ; ಇದು ಪ್ರತಿಯೊಂದು ಕುಟುಂಬದ ಆರೋಗ್ಯ, ಪ್ರತಿಯೊಂದು ಮಗುವಿನ ಭವಿಷ್ಯ ಮತ್ತು ರಾಷ್ಟ್ರದ ಯೋಗಕ್ಷೇಮದ ಬಗೆಗಿನ ಜವಾಬ್ದಾರಿಯಾಗಿದೆ ಎಂದು ಖಾದರ್ ಹೇಳಿದರು.
ಸಾರ್ವಜನಿಕ ಆರೋಗ್ಯದಲ್ಲಿ ಯಾವುದೇ ರಾಜಿ ಇಲ್ಲ, ಉದ್ದೇಶಪೂರ್ವಕ ಉಲ್ಲಂಘನೆಗಳಿಗೆ ಸಹಿಷ್ಣುತೆ ಇಲ್ಲ ಮತ್ತು ನಾಗರಿಕರನ್ನು ರಕ್ಷಿಸುವಲ್ಲಿ ಯಾವುದೇ ವಿಳಂಬವಿಲ್ಲ ಎಂಬುದಕ್ಕೆ ನಾವು ಬದ್ಧರಾಗಿದ್ದೇವೆ. ನಾವೆಲ್ಲರೂ ಸೇರಿ ಸುರಕ್ಷಿತ ಆಹಾರ, ಸುರಕ್ಷಿತ ಔಷಧ ಮತ್ತು ಆರೋಗ್ಯಕರ ಭಾರತವನ್ನು ನಿರ್ಮಿಸೋಣ ಎಂದು ಖಾದರ್ ಕರೆ ನೀಡಿದರು.
ಸಮ್ಮೇಳನದಲ್ಲಿ ರಾಜ್ಯ ಸರಕಾರಕದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.