ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿನ ಸುಮಾರು 24 ಲಕ್ಷ ಆಸ್ತಿ ಮಾಲಕರಿಗೆ ಉಚಿತವಾಗಿ ವಾಟ್ಸಾಪ್ ಮೂಲಕ ಇ-ಖಾತಾ ವಿತರಿಸಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.

ಗುರುವಾರ ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ರಾಜ್ಯ ಸರಕಾರದ 6ನೇ ಗ್ಯಾರಂಟಿಯಾದ ‘ಭೂ-ಗ್ಯಾರಂಟಿ - ನನ್ನ ಖಾತಾ, ನನ್ನ ಹಕ್ಕು’ ಅಭಿಯಾನದಡಿ ಐದು ಬೆಂಗಳೂರು ನಗರ ಪಾಲಿಕೆಗಳ ವ್ಯಾಪ್ತಿಯ ಸುಮಾರು 24 ಲಕ್ಷ ಆಸ್ತಿ ಮಾಲಕರಿಗೆ ಇ-ಖಾತಾ ಪ್ರಮಾಣಪತ್ರಗಳನ್ನು ಉಚಿತವಾಗಿ ವಾಟ್ಸಾಪ್ ಮೂಲಕ ನೇರವಾಗಿ ತಲುಪಿಸಲಾಗುತ್ತಿದೆ ಎಂದರು.

ಆಸ್ತಿ ಮಾಲಕರು ತಮ್ಮ ಇ-ಖಾತಾ ಪ್ರಮಾಣಪತ್ರವನ್ನು ಪಿಡಿಎಫ್ ರೂಪದಲ್ಲಿ, ವಿಶಿಷ್ಟ ಇ-ಪಿಐಡಿ ಸಂಖ್ಯೆಯೊಂದಿಗೆ ವಾಟ್ಸಾಪ್ ಮೂಲಕ ಪಡೆಯಲಿದ್ದಾರೆ. ಇದರಿಂದ ಸಾರ್ವಜನಿಕರು ಯಾವುದೇ ಸರಕಾರಿ ಕಚೇರಿಗೆ ಭೇಟಿ ನೀಡದೆ ಅಥವಾ ಮಧ್ಯವರ್ತಿಗಳನ್ನು ಸಂಪರ್ಕಿಸದೆ ತಮ್ಮ ಇ-ಖಾತಾ ಪ್ರಮಾಣಪತ್ರವನ್ನು ಡೌನ್‍ಲೋಡ್ ಮಾಡಿಕೊಂಡು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿರಿಸಿಕೊಳ್ಳಬಹುದು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ವಾಟ್ಸಾಪ್ ಸಂದೇಶದೊಂದಿಗೆ ಜಿಬಿಎಯ ಅಧಿಕೃತ ಇ-ಆಸ್ತಿ ಪೋರ್ಟಲ್ ಆದ https://GBAeAasthi.karnataka.gov.in  ಲಿಂಕ್ ಅನ್ನು ಸಹ ನೀಡಲಾಗಿದ್ದು, ಸಾರ್ವಜನಿಕರು ತಮ್ಮ ePID ಸಂಖ್ಯೆಯನ್ನು ಬಳಸಿ ಆನ್‍ಲೈನ್ ಮೂಲಕ ಇ-ಖಾತಾದಲ್ಲಿ ತಿದ್ದುಪಡಿ ಅಥವಾ ಮಾಲಕತ್ವ ಬದಲಾವಣೆ(ಮ್ಯುಟೇಷನ್) ಪ್ರಕ್ರಿಯೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ.

ಎಲ್ಲಾ ಆಸ್ತಿ ಮಾಲಕರು ತಮ್ಮ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿ, ಇ-ಖಾತಾ ಪಿಡಿಎಫ್ ಪ್ರಮಾಣಪತ್ರವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ. ಈ ಸೇವೆಯು ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳಿಗೆ ಹಣ ಪಾವತಿಸುವ ಅಗತ್ಯವಿರುವುದಿಲ್ಲ ಎಂದು ಮುಖ್ಯ ಆಯುಕ್ತರು ವಿವರಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೇಶ್ ಮಲ್ಲೂರು/ವಾರ್ತಾಭಾರತಿ

contributor

ಯೋಗೇಶ್ ಮಲ್ಲೂರು ಅವರು ವಾರ್ತಾಭಾರತಿ ದಿನಪತ್ರಿಕೆಯ ಬೆಂಗಳೂರು ಬ್ಯೂರೋದಲ್ಲಿ ವರದಿಗಾರ/ಉಪಸಂಪಾದಕ. ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಲ್ಲೂರಿನವರಾದ ಯೋಗೇಶ್, ತುಮಕೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಇವರು ಹಲವು ದಿನಪತ್ರಿಕೆಗಳು ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ಕ್ರೈಂ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಒಟ್ಟಾರೆ, ಪತ್ರಿಕೋದ್ಯಮ ವಲಯದಲ್ಲಿ ಬೆಂಗಳೂರು, ತುಮಕೂರಿನಲ್ಲಿ ಯೋಗೇಶ್ ಅವರಿಗೆ 7 ವರ್ಷಗಳ ಅನುಭವವಿದೆ.