ಉಡುಪಿ, ದಕ್ಷಿಣ ಕನ್ನಡದಲ್ಲಿ ‘ತುಳು’ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ; ಅಧಿಕೃತ ಆದೇಶ ಪ್ರಕಟ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರಾವಳಿಯ ಬಹುದಿನಗಳ ಬೇಡಿಕೆಗೆ ರಾಜ್ಯ ಸರಕಾರ ಅಧಿಕೃತ ಮುದ್ರೆ ಒತ್ತಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸೀಮಿತವಾಗಿ ಆಡಳಿತಾತ್ಮಕ ಉದ್ದೇಶಗಳಿಗಾಗಿ ಕನ್ನಡದ ಜೊತೆಗೆ ‘ತುಳು’ ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿ ಘೋಷಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಪ್ರಸಕ್ತ ಸಾಲಿನ ಸೆ.18ರಂದು ನಡೆದ ಸಚಿವ ಸಂಪುಟದ ಅನುಮೋದನೆಯನ್ವಯ ನ.25ರಂದು ಈ ಕುರಿತು ಅಧಿಕೃತ ಆದೇಶ ಪ್ರಕಟಿಸಲಾಗಿದೆ. ತುಳು ಭಾಷೆಯ ಭಾಷಿಕ, ಶೈಕ್ಷಣಿಕ ಹಾಗೂ ಸಾಂಸ್ಕೃ ತಿಕ ಬೆಳವಣಿಗೆಯನ್ನು ಪರಿಗಣಿಸಿ ಹಾಗೂ ತುಳು ಭಾಷಿಕ ನಾಗರಿಕರಿಗೆ ಸರಕಾರಿ ಸೇವೆಗಳ ಲಭ್ಯತೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.
ಅನುಷ್ಠಾನದ ಪ್ರಮುಖ ಅಂಶಗಳು: ಕನ್ನಡ ಲಿಪಿ ಬಳಕೆ: ಆಡಳಿತಾತ್ಮಕ ಉದ್ದೇಶಗಳಿಗೆ ತುಳು ಭಾಷೆಯನ್ನು ‘ಕನ್ನಡ ಲಿಪಿ’ಯಲ್ಲಿಯೇ ಬಳಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಅನುಷ್ಠಾನ ಘಟಕ ಸ್ಥಾಪನೆ: ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಪ್ರತ್ಯೇಕ ‘ಅನುಷ್ಠಾನ ಘಟಕ’ ಸ್ಥಾಪಿಸಲಾಗುವುದು.
20 ಭಾಷಾಂತರಕಾರರ ನೇಮಕ: ಜಿಲ್ಲಾ ಮತ್ತು ತಾಲೂಕು ಕಚೇರಿಗಳಲ್ಲಿ ತುಳು ಭಾಷೆಯನ್ನು ಆಡಳಿತದಲ್ಲಿ ಜಾರಿಗೆ ತರಲು ಒಟ್ಟು 20 ಭಾಷಾಂತರಕಾರರನ್ನು ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ತಲಾ ಇಬ್ಬರಂತೆ ಒಟ್ಟು 4 ಭಾಷಾಂತರಕಾರರನ್ನು ನೇಮಿಸಲಾಗುವುದು.
ದಕ್ಷಿಣ ಕನ್ನಡದ 9 ತಾಲೂಕುಗಳು ಹಾಗೂ ಉಡುಪಿಯ 7 ತಾಲೂಕುಗಳು ಸೇರಿದಂತೆ ಒಟ್ಟು 16 ತಾಲೂಕುಗಳ ತಹಶೀಲ್ದಾರ್ ಕಚೇರಿಗಳಲ್ಲಿ ತಲಾ ಒಬ್ಬರಂತೆ 16 ಭಾಷಾಂತರಕಾರರನ್ನು ನೇಮಿಸಲಾಗುವುದು. ನೇಮಕಗೊಳ್ಳುವ ಪ್ರತಿಯೊಬ್ಬ ಭಾಷಾಂತರಕಾರರಿಗೆ ಎಲ್ಲ ವೆಚ್ಚಗಳೊಳಗೊಂಡಂತೆ ಮಾಸಿಕ 30 ಸಾವಿರ ರೂ. ಗೌರವ ಸಂಭಾವನೆ ನಿಗದಿಪಡಿಸಲಾಗಿದೆ.
ತುಳುವಿನಲ್ಲೇ ಅರ್ಜಿ ಸ್ವೀಕಾರ ಮತ್ತು ಉತ್ತರ: ಎರಡೂ ಜಿಲ್ಲೆಗಳ ಸಾರ್ವಜನಿಕ ಕಚೇರಿಗಳಲ್ಲಿ ಸಾರ್ವಜನಿಕರಿಂದ ಮನವಿಗಳು ಮತ್ತು ಅರ್ಜಿಗಳನ್ನು ತುಳು ಭಾಷೆಯಲ್ಲಿಯೂ ಸ್ವೀಕರಿಸಿ, ಅವುಗಳಿಗೆ ನೀಡಲಾಗುವ ಮಾಹಿತಿ ಮತ್ತು ಉತ್ತರಗಳನ್ನು ಕನ್ನಡದ ಜೊತೆಗೆ ತುಳು ಭಾಷೆಯಲ್ಲಿಯೂ ನೀಡಬೇಕು.
ಸೂಚನಾ ಫಲಕಗಳು ಕಡ್ಡಾಯ: ಎರಡೂ ಜಿಲ್ಲೆಗಳಿಗೆ ಸೀಮಿತವಾಗಿ ಜಿಲ್ಲಾಧಿಕಾರಿಗಳ ಹಂತದಲ್ಲಿ ಹೊರಡಿಸುವ ಪ್ರಮುಖ ಆದೇಶಗಳು ಹಾಗೂ ಪ್ರದರ್ಶಿಸಬೇಕಾದ ಪ್ರಮುಖ ಸೂಚನಾ ಫಲಕಗಳನ್ನು ಕನ್ನಡ ಭಾಷೆಯೊಂದಿಗೆ ತುಳು ಭಾಷೆಯಲ್ಲಿಯೂ ಕಡ್ಡಾಯವಾಗಿ ಪ್ರಚುರಪಡಿಸಲು ಆದೇಶದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.