ಬೆಂಗಳೂರು : ಮುಂದಿನ ಹದಿನೈದು ದಿನದೊಳಗೆ ಸಾಮಾಜಿಕ ಭದ್ರತಾ ಪಿಂಚಣಿ ವಿತರಣೆ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಶುಕ್ರವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೃದ್ಧಾಪ್ಯ, ಅಂಗವಿಕಲ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳು ಸ್ಥಗಿತಗೊಂಡಿರುವ ಸಂಬಂಧ ಈಗಾಗಲೇ ಎರಡು-ಮೂರು ಸಭೆಗಳನ್ನು ನಡೆಸಲಾಗಿದೆ. ಈ ಹಿಂದೆ 30ಸಾವಿರ ರೂ., ಇದ್ದ ಆದಾಯದ ಮಿತಿಯನ್ನು 1.20ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಹೀಗಾಗಿ ಆದಾಯದ ಕಾರಣದಿಂದ ಅರ್ಹರಿಗೆ ಸಮಸ್ಯೆಯಾಗುವುದಿಲ್ಲ ಎಂದರು.

ಅರ್ಹ ವಯಸ್ಸು ತಲುಪದವರು ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, 60 ವರ್ಷ ಮೇಲ್ಪಟ್ಟವರಿಗೆ ನೀಡಬೇಕಾದ ವೃದ್ಧಾಪ್ಯ ಪಿಂಚಣಿಗೆ 40, 30 ಹಾಗೂ 20 ವರ್ಷದವರೂ ಅರ್ಜಿ ಸಲ್ಲಿಸಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇಂತಹ ಸುಮಾರು 23 ಲಕ್ಷ ಅರ್ಜಿಗಳನ್ನು ಪರಿಶೀಲಿಸಿ ಅನರ್ಹ ಅರ್ಜಿಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಕಾರಣದಿಂದಾಗಿ ಮಧ್ಯಂತರದಲ್ಲಿ ಪಿಂಚಣಿ ವಿತರಣೆ ಪ್ರಕ್ರಿಯೆ ಕೆಲವು ದಿನಗಳ ಕಾಲ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಚಾಲನೆ ನೀಡಲಾಗಿದ್ದು, ಮುಂದಿನ ಒಂದು ವಾರದಿಂದ 15 ದಿನಗಳೊಳಗೆ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ಭರವಸೆ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಕರ್ನಾಟಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ಭೇಟಿಯಾಗುವ ಸಾಧ್ಯತೆ ಕುರಿತು ಮಾಹಿತಿ ನೀಡಿದ ಅವರು, ಪ್ರಧಾನಮಂತ್ರಿಗಳ ರಾಜ್ಯ ಪ್ರವಾಸದ ಉದ್ದೇಶ ಬೇರೆ ಇದೆ. ರಾಜ್ಯದ ಸಮಸ್ಯೆಗಳ ಕುರಿತು ಚರ್ಚಿಸಲು ಈಗಾಗಲೇ ಸಮಯಾವಕಾಶ ಕೋರಲಾಗಿದೆ. ಪ್ರಧಾನಮಂತ್ರಿ ಕಚೇರಿಯಿಂದ ಅಧಿಕೃತವಾಗಿ ಸಮಯ ನೀಡುವ ನಿರೀಕ್ಷೆಯಿದೆ. ಸಮಯ ನೀಡಿದರೆ ಹೊಸದಿಲ್ಲಿಗೆ ತೆರಳಿ ರಾಜ್ಯದ ಬರ ಪರಿಸ್ಥಿತಿ ಹಾಗೂ ಪರಿಹಾರದ ಅಗತ್ಯವನ್ನು ವಿವರಿಸಲಾಗುವುದು. ಒಂದು ವೇಳೆ ಮೈಸೂರಿನಲ್ಲೇ ಭೇಟಿಯಾಗುವಂತೆ ಸೂಚಿಸಿದರೆ ಅಲ್ಲಿಯೇ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.

ಸರಕಾರ ಯಾವುದೇ ವೆಚ್ಚ ಮಾಡಿದರೂ ಅದು ಆರ್ಥಿಕ ಹೊರೆ ಎನಿಸಿಕೊಳ್ಳುತ್ತದೆ. ಆದರೆ ಆದಾಯ ಮತ್ತು ವೆಚ್ಚ ಎರಡನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಬಾರಿ ಕಳೆದ ವರ್ಷಕ್ಕಿಂತ ಸರಕಾರದ ಆದಾಯ ಉತ್ತಮವಾಗಿದೆ. ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ಇಲಾಖೆಗಳ ಮೂಲಕ ಉತ್ತಮ ಆದಾಯ ಬರುತ್ತಿದೆ. ಆದಾಯದ ಸ್ಥಿತಿಗತಿಗಳನ್ನು ಪರಿಶೀಲಿಸಿಯೇ ಸರಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.

ಎಸ್‍ಐಆರ್ ಪ್ರಕ್ರಿಯೆಯಲ್ಲಿ ಸುಮಾರು ಒಂದು ಕೋಟಿ ಎಂಟು ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ಪೈಕಿ 16 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ದಾಖಲಿಸಲಾಗಿದೆ. ಆದರೆ ಅವರಲ್ಲಿ ಕೆಲವರು ಜೀವಂತವಾಗಿದ್ದಾರೆ ಎಂಬ ದೂರುಗಳಿವೆ. ಇನ್ನು ಸುಮಾರು 65 ಲಕ್ಷ ಮಂದಿ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಲಾಗಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರೆ, ಅವರ ಹೆಸರು ಹೊಸ ಸ್ಥಳದ ಮತದಾರರ ಪಟ್ಟಿಯಲ್ಲಿ ಇರಬೇಕಲ್ಲವೇ? ಉದಾಹರಣೆಗೆ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಗೊಂಡಿದ್ದರೆ ಮೈಸೂರಿನ ಪಟ್ಟಿಯಲ್ಲಿ ಹೆಸರು ಇರಬೇಕು. ಆದರೆ ಅಲ್ಲಿ ಹೆಸರು ಇಲ್ಲದಿರುವುದು ಗಂಭೀರ ಪ್ರಶ್ನೆಯಾಗಿದೆ ಎಂದು ಪರಮೇಶ್ವರ್ ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor