ಬೆಂಗಳೂರು : ‘ರಾಜ್ಯದ ಎಲ್ಲ ಇಲಾಖೆಗಳಲ್ಲಿ ನಡೆಯುತ್ತಿರುವ ಕಮಿಶನ್ ದಂಧೆಯನ್ನು ನಿಲ್ಲಿಸಿ, ಜನಸಾಮಾನ್ಯರ ಸಂಕಷ್ಟಕ್ಕೆ ಮಿಡಿಯುವ ಪ್ರಯತ್ನ ಮಾಡಿ. ಇಲ್ಲವಾದರೆ ನೀವು ‘ಫೋನ್ ಪೇ ಸಿಎಂ' ಎಂದು ಘೋಷಿಸಿಕೊಳ್ಳಿ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಶುಕ್ರವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಆರ್.ಅಶೋಕ್, ‘ಈ ಹಿಂದೆ ‘ಪೇ ಸಿಎಂ’ ಎಂದು ಆರೋಪ ಮಾಡಿದವರು ಈಗ ಫೋನ್ ಪೇ ಸಿಎಂ. ‘ಪೇ ಸಿಎಂ’ ಎಂದವರ ಹಣೆಬರಹವೀಗ ‘ಫೋನ್ ಪೇ’ ಕಮಿಷನ್'ನಲ್ಲಿ ಬಯಲಾಗಿದೆ. ಬಿಜೆಪಿ ಅವಧಿಯಲ್ಲಿ ಪೇ ಸಿಎಂ ಅಭಿಯಾನ ನಡೆಸಿ ಅಪಪ್ರಚಾರ ಮಾಡಿದ್ದ ಕಾಂಗ್ರೆಸ್ ಪಕ್ಷ ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರಕಾರದಲ್ಲಿ ಫೋನ್ ಪೇ ಕಮಿಶನ್ ವ್ಯವಹಾರ ನಡೆಸುತ್ತಿದೆ’ ಎಂದು ದೂರಿದ್ದಾರೆ.

‘ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್‍ಗಳಂತಹ ಆಡಳಿತದ ಶಕ್ತಿಕೇಂದ್ರಗಳಲ್ಲೇ ಕಮಿಷನ್ ದಂಧೆ ತಾಂಡವವಾಡುತ್ತಿದೆ. DBTಯಂತೆಯೇ DCT- Direct Commission Transfer  ಎಂಬ ಹೊಸ ಡಿಜಿಟಲ್ ಭ್ರಷ್ಟಾ ಚಾರ ವ್ಯವಸ್ಥೆಯನ್ನು ಕಾಂಗ್ರೆಸ್ ಸರಕಾರ ರೂಪಿಸಿದೆ. ಕ್ಯಾಂಟೀನ್ ಗುತ್ತಿಗೆದಾರರ ಬಳಿಯೂ ‘ಫೋನ್ ಪೇ' ಮೂಲಕ 10 ಲಕ್ಷ ರೂ.ಲಂಚ ವಸೂಲಿ ಮಾಡುವ ಮಟ್ಟಕ್ಕೆ ಈ ಭ್ರಷ್ಟ ಸರಕಾರದ ಹಗಲು ದರೋಡೆ ತಲುಪಿದೆ ಎಂದರೆ ಇನ್ನು ದೊಡ್ಡ-ದೊಡ್ಡ ತಿಮಿಂಗಿಲಗಳು ಹೇಗೆ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿವೆ ಎಂದು ಊಹಿಸಿಕೊಳ್ಳಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

‘ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು ಹಣವಿಲ್ಲ, ಗೃಹಲಕ್ಷ್ಮಿಯರಿಗೆ ನೀಡಲು ಹಣವಿಲ್ಲ, ಡೀಸೆಲ್ ಹಾಕಲು ದುಡ್ಡಿಲ್ಲ ಎನ್ನುವ ಗತಿಗೆಟ್ಟ ಸರಕಾರ, ನಾಚಿಕೆ ಮಾನ ಬಿಟ್ಟು ಕಷ್ಟಪಟ್ಟು ದುಡಿಯುವ ಗುತ್ತಿಗೆದಾರರಿಂದ ಕಮಿಶನ್ ವಸೂಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದೆ. ಪದೇ ಪದೇ ಲಂಚ ಪಡೆಯುವುದರ ಜೊತೆಗೆ ಬೆದರಿಕೆ ಒಡ್ಡಿದ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿರುವ ಗುತ್ತಿಗೆದಾರ, ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಸಭಾಪತಿ ಆಪ್ತ ಕಾರ್ಯದರ್ಶಿಗೆ ವಕೀಲರ ಮೂಲಕ ನೋಟಿಸ್ ಕೊಡಿಸಿದ್ದಾರೆ’ ಎಂದು ಅವರು ಉಲ್ಲೇಖಿಸಿದ್ದಾರೆ.

‘ಮುಖ್ಯಮಂತ್ರಿಗಳೇ, ಲಂಚ ಕೇಳಿದರೆ ನನಗೆ ನೇರವಾಗಿ ಕರೆ ಮಾಡಿ ಎಂದು ನೀವು ಹೇಳುತ್ತೀರಿ. ಆದರೆ ನಿಮ್ಮ ಅಧಿಕಾರಿಗಳು ನೇರವಾಗಿ ಫೋನ್ ಪೇ ಮಾಡಿ ಎನ್ನುತ್ತಿದ್ದಾರೆ. ನೀವೇ ಸಚಿವರಾಗಿರುವ ಆಡಳಿತ ಸುಧಾರಣಾ ಇಲಾಖೆಯಲ್ಲಿ ಕಮಿಶನ್ ದಂಧೆ ನಡೆಯುತ್ತಿರುವುದು ನಿಮಗೆ ತಿಳಿಯದೇ ಹೋಯಿತೇ? ಅಥವಾ ಇದಕ್ಕೂ ನಿಮ್ಮ ಅನುಮತಿ ಸಿಕ್ಕಿದೆಯೇ?, ಬೊಕ್ಕಸದಲ್ಲಿ ಹಣವಿಲ್ಲ ಎಂದು ರೈತರ ಮುಂದೆ ಮುಲಾಜಿಲ್ಲದೆ ಹೇಳುವ ನಿಮಗೆ, ಕಮಿಶನ್ ಪಡೆಯಬಾರದು ಎಂದು ಸೂಚನೆ ಕೊಡುವಷ್ಟು ತಾಕತ್ತಿಲ್ಲ ಎಂದಮೇಲೆ ಅಧಿಕಾರದಲ್ಲಾದರೂ ಯಾಕಿರಬೇಕು?’ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor