Bengaluru | ಒಂದೇ ಕುಟುಂಬದ 7 ಮಂದಿಯ ಕೊಲೆ ಪ್ರಕರಣ: ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದೇನು?
ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್
ಬೆಂಗಳೂರು: ಒಂದೇ ಕುಟುಂಬದ 7 ಮಂದಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಗಂಭೀರ ಅಪರಾಧವಾಗಿದೆ. ನಾಪತ್ತೆ ಪ್ರಕರಣದ ತನಿಖೆ ಆರಂಭಿಸಿದಾಗ ಈ ಕೊಲೆಗಳ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
15 ದಿನಗಳ ಅಂತರದಲ್ಲಿ 7 ಕೊಲೆ :
ಈ ಕೊಲೆಗಳು ಒಂದೇ ದಿನ ನಡೆದಿಲ್ಲ. ಬದಲಾಗಿ, ಸುಮಾರು 15 ದಿನಗಳ ಅಂತರದಲ್ಲಿ ನಡೆದಿವೆ. ಸದ್ಯ ಒಬ್ಬ ಬಾಲಕನ ಮೃತದೇಹ ಪತ್ತೆಯಾಗಿದ್ದು, ಇನ್ನೂ ಆರು ಮಂದಿಯ ಮೃತದೇಹಗಳು ಪತ್ತೆಯಾಗಬೇಕಿದೆ. ಮೃತದೇಹಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರು.
ಆರೋಪಿಯೊಂದಿಗೆ ಮತ್ತೊಬ್ಬ ಬಾಲಕ ಪತ್ತೆ ! :
ಆರೋಪಿ ಇಂದುಶೇಖರ್ ನನ್ನು ಬಂಧಿಸಿದಾಗ ಆತನೊಂದಿಗೆ ಮತ್ತೊಬ್ಬ ಬಾಲಕನೂ ಇದ್ದನು. ಆ ಬಾಲಕನನ್ನು ಕೊಲೆ ಮಾಡುವ ಉದ್ದೇಶದಿಂದ ಕರೆದುಕೊಂಡು ಹೋಗುತ್ತಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಪ್ರಕರಣವನ್ನು ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯದ ಮುಂದೆ ಕೊಂಡೊಯ್ದು, ಆದಷ್ಟು ಬೇಗ ಆರೋಪಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಇಂದುಶೇಖರ್ ವಿರುದ್ಧ 2018ರಲ್ಲಿ ಸರಗಳ್ಳತನ ಪ್ರಕರಣವೊಂದು ದಾಖಲಾಗಿರುವುದು ಕೂಡ ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.