ಡಾ.ನಸೀಂ ಅಹ್ಮದ್

ಬೆಂಗಳೂರು : ಕರ್ನಾಟಕದಿಂದ ರಾಜ್ಯ ಹಜ್ ಇನ್‍ಸ್ಪೆಕ್ಟರ್ ಹುದ್ದೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ನೀಡಲಾದ ಅಂಕಗಳಲ್ಲಿ ತಾರತಮ್ಯವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸಂದರ್ಶನದ ಅಂಕಗಳನ್ನು ಮರುಪರಿಶೀಲಿಸುವುದರ ಜೊತೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಸಂಪೂರ್ಣ ಅಂಕಗಳ ಪಟ್ಟಿಯನ್ನು ಬಹಿರಂಗಪಡಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್‍ಮೆಂಟ್ ಕರ್ನಾಟಕ ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ನಸೀಂ ಅಹ್ಮದ್, ಕರ್ನಾಟಕದ ಹಲವು ಅರ್ಹ ಅಭ್ಯರ್ಥಿಗಳು ಸಿಬಿಟಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಸಂದರ್ಶನದಲ್ಲಿ ಕಡಿಮೆ ಅಂಕಗಳನ್ನು ನೀಡಲಾಗಿದೆ. ಇದರಿಂದ ಅಭ್ಯರ್ಥಿಗಳ ಒಟ್ಟು ಅಂಕಗಳ ಮೇಲೆ ಪರಿಣಾಮ ಬೀರಿದ್ದು, ಆಯ್ಕೆಯ ಅವಕಾಶಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೇರಳ, ತೆಲಂಗಾಣ ಮತ್ತು ಪಂಜಾಬ್ ರಾಜ್ಯಗಳ ಅಭ್ಯರ್ಥಿಗಳ ಸಂದರ್ಶನದ ಅಂಕಗಳನ್ನು ಮರುಪರಿಶೀಲಿಸಲಾಗಿದೆ ಅಥವಾ ಮರುಪರೀಕ್ಷೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕ್ರಿಯೆಯ ಬಳಿಕ ಈ ಹಿಂದೆ ಆಯ್ಕೆ ಪಟ್ಟಿಯಿಂದ ಹೊರಗುಳಿದಿದ್ದ ಕೆಲವು ಅಭ್ಯರ್ಥಿಗಳು ಸಂದರ್ಶನದಲ್ಲಿ 15 ಅಂಕಗಳನ್ನು ಪಡೆದು ಆಯ್ಕೆಗೆ ಅರ್ಹರಾಗಿದ್ದಾರೆ ಎನ್ನಲಾಗಿದೆ. ಕರ್ನಾಟಕದ ಅಭ್ಯರ್ಥಿಗಳಿಗೂ ಇದೇ ರೀತಿಯ ನ್ಯಾಯಯುತ ಮೌಲ್ಯಮಾಪನ ಕ್ರಮ ಅನ್ವಯಿಸಬೇಕು ಎಂದು ನಸೀಂ ಅಹ್ಮದ್ ಒತ್ತಾಯಿಸಿದ್ದಾರೆ.

ಸಂದರ್ಶನದ ಅಂಕಗಳನ್ನು ಮರುಪರಿಶೀಲಿಸಬೇಕು, ಇತರ ರಾಜ್ಯಗಳಲ್ಲಿ ಅನುಸರಿಸಿರುವ ಮರುಮೌಲ್ಯಮಾಪನದ ಮಾನದಂಡಗಳನ್ನು ಕರ್ನಾಟಕದ ಅಭ್ಯರ್ಥಿಗಳಿಗೂ ಅನ್ವಯಿಸಬೇಕು. ಅಸಮಾನವಾಗಿ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳಿಗೆ ಕನಿಷ್ಠ 15 ಅಂಕಗಳನ್ನು ನೀಡುವ ವಿಚಾರವನ್ನು ನ್ಯಾಯಯುತವಾಗಿ ಪರಿಗಣಿಸಬೇಕು. ಅಲ್ಲದೆ, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲ ಅಭ್ಯರ್ಥಿಗಳ ಸಿಬಿಟಿ ಪರೀಕ್ಷೆಯ ಸಂಪೂರ್ಣ ಅಂಕಗಳ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೇರಳ, ತೆಲಂಗಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಮರುಪರಿಶೀಲನೆಗೆ ಒಳಗಾದ ಅಭ್ಯರ್ಥಿಗಳ ಹೆಸರು, ಹಿಂದಿನ ಮತ್ತು ಪರಿಷ್ಕೃ ತ ಅಂಕಗಳು ಹಾಗೂ ಅನುಸರಿಸಿದ ಪ್ರಕ್ರಿಯೆಯ ವಿವರಗಳನ್ನು ಬಹಿರಂಗಪಡಿಸಬೇಕು. ಸಂದರ್ಶನದ ಮೌಲ್ಯಮಾಪನದಲ್ಲಿ ಪಾರದರ್ಶಕತೆ ಖಾತರಿಪಡಿಸುವುದರ ಜೊತೆಗೆ ಸಂದರ್ಶನ ಪ್ರಕ್ರಿಯೆಯ ವೀಡಿಯೊ ರೆಕಾರ್ಡಿಂಗ್‌ ವ್ಯವಸ್ಥೆ ಕಲ್ಪಿಸಬೇಕು. ಸಂದರ್ಶನದ ಅಂಕಗಳ ಮರುಪರಿಶೀಲನೆ ಬಳಿಕ ಎಲ್ಲ ರಾಜ್ಯಗಳ ಅಭ್ಯರ್ಥಿಗಳಿಗೆ ಏಕರೂಪದ ಮಾನದಂಡಗಳನ್ನು ಅನ್ವಯಿಸಿ ಪರಿಷ್ಕೃತ ಅರ್ಹತಾ ಪಟ್ಟಿ ಪ್ರಕಟಿಸಬೇಕು ಎಂದು ನಸೀಂ ಅಹ್ಮದ್ ಆಗ್ರಹಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor