ಬೆಂಗಳೂರು: ಒಂಟಿ ಮಹಿಳೆ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ
ಬೆಂಗಳೂರು: ನಾಲ್ಕು ತಿಂಗಳುಗಳ ಹಿಂದೆ ಬೆಳಕಿಗೆ ಬಂದಿದ್ದ ಒಂಟಿ ಮಹಿಳೆಯ ನಾಪತ್ತೆ ಪ್ರಕರಣವನ್ನು ಬಗೆಹರಿಸುವಲ್ಲಿ ಕೊತ್ತನೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಆಟೊ ಚಾಲಕ ಲಕ್ಷ್ಮಣ್ ಎಂಬಾತನನ್ನು ಬಂಧಿಸಳಾಗಿದೆ.
ನ.26ರಂದು ನಾಗೇನಹಳ್ಳಿಯ ಸ್ಲಂ ಬೋರ್ಡ್ ವಸತಿ ಪ್ರದೇಶದಿಂದ ಕಾಣೆಯಾಗಿದ್ದ ಮೇರಿ (59) ಎಂಬವರ ಮೃತದೇಹ ಮಾ.9ರಂದು ಬಾಗಲೂರಿನ ಹೊಸೂರು ಬಂಡೆ ಬಳಿ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಿದಾಗ ಮೇರಿ ವಾಸವಿದ್ದ ಪ್ರದೇಶದಲ್ಲಿಯೇ ಆಟೊ ಚಾಲಕನಾಗಿದ್ದ ಲಕ್ಷ್ಮಣ್ ಕೃತ್ಯವೆಸಗಿರುವ ಮಾಹಿತಿ ಹೊರಬಂದಿದೆ.
ಆಕೆಯ ಮೈಮೇಲಿದ್ದ 50 ಗ್ರಾಂ ಚಿನ್ನಾಭರಣಗಳ ಆಸೆಗೆ ನವೆಂಬರ್ 26ರಂದು ಹತ್ಯೆಗೈದು ಮಧ್ಯಾಹ್ನ 3 ಗಂಟೆಗೆ ಆಟೊದಲ್ಲಿ ಮೇರಿಯ ಮೃತದೇಹ ಕೊಂಡೊಯ್ದು ಬಾಗಲೂರು ಸಮೀಪದ ಹೊಸೂರು ಬಂಡೆಯ ಕಸ ಡಂಪಿಂಗ್ ಯಾರ್ಡ್‍ನಲ್ಲಿ ಎಸೆದು ಬಂದಿದ್ದ. ಬಳಿಕ ಮೇರಿಯ ಮೊಬೈಲ್ ಆನ್ ಮಾಡಿ ಕಸ ಸಂಗ್ರಹಿಸುವ ಆಟೊವೊಂದರಲ್ಲಿ ಎಸೆದಿದ್ದ.
ಇತ್ತ ಮೇರಿಯ ನಾಪತ್ತೆ ಪ್ರಕರಣದ ತನಿಖೆ ಆರಂಭಿಸಿದ್ದ ಕೊತ್ತನೂರು ಠಾಣೆ ಪೊಲೀಸರು, ಆರೋಪಿಯ ಸಮ್ಮುಖದಲ್ಲೇ ಮೃತದೇಹ ಪತ್ತೆ ಹಚ್ಚಿದ್ದಾರೆ. ಮಹಿಳೆಯ ಬಳಿಯಿದ್ದ ಚಿನ್ನಕ್ಕಾಗಿ ಹತ್ಯೆಗೈದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ ಎಂದು ಬೆಂಗಳೂರು ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.