ಬೆಂಗಳೂರು : ಭಾರತ್‌ ಜೋಡೋ ಯಾತ್ರೆ(2.0) ಎರಡನೇ ಭಾಗವಾಗಿ ಕರ್ನಾಟಕದಲ್ಲಿ ಸೆ.30ರಿಂದ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಸೋಮವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು 2022ರ ಸೆ.7ರಂದು ಕನ್ಯಾಕುಮಾರಿಯಲ್ಲಿ ಭಾರತ ಜೋಡೋ ಪಾದಯಾತ್ರೆ ಆರಂಭಿಸಿದ್ದರು. ನಂತರ ಕರ್ನಾಟಕದಲ್ಲಿ ಸೆ.30ರಂದು ಗುಂಡ್ಲುಪೇಟೆಯಲ್ಲಿ ಯಾತ್ರೆ ಆರಂಭಿಸಿದ್ದರು. ಅಕ್ಟೋಬರ್ 21ರವರೆಗೆ 11 ಜಿಲ್ಲೆಗಳಲ್ಲಿ 600 ಕಿ.ಮೀ ಪಾದಯಾತ್ರೆ ಮಾಡಿ, ಜನಸಾಮಾನ್ಯರನ್ನು ಸಂಪರ್ಕಿಸಿ ಅವರ ಕಷ್ಟ ಆಲಿಸಿದರು.ಇದರ ನೆನಪಿನಲ್ಲಿ ಇದೇ ಸೆ.30ರಂದು ಭಾರತ ಜೋಡೋ ಯಾತ್ರೆ 2.0 ಅನ್ನು ರಾಜ್ಯದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.

ರಾಹುಲ್ ಗಾಂಧಿ ಅವರು ಮಾಡಿದ 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ಯಾತ್ರೆ ಮಾಡುತ್ತೇವೆ. ಈ ಯಾತ್ರೆಯಲ್ಲಿ ಮಧ್ಯಾಹ್ನ 1ರಿಂದ ಸಂಜೆ ಸಾರ್ವಜನಿಕ ಸಭೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಸೋತಿರುವ 84 ಕ್ಷೇತ್ರಗಳಲ್ಲಿ ನಾವು ಈ ಯಾತ್ರೆ ಮಾಡಲು ತೀರ್ಮಾನಿಸಿದ್ದೇವೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಿಂದ ಆರಂಭಿಸುತ್ತಿದ್ದೇವೆ. ಸಚಿವರಾದ ಮಧುಬಂಗಾರಪ್ಪ, ರುದ್ರಪ್ಪ ಲಮಾಣಿ, ಝಮೀರ್ ಅಹ್ಮದ್ ಖಾನ್, ಬಿ.ಎಲ್.ಶಂಕರ್ ಸೇರಿದಂತೆ ಪ್ರಮುಖ ನಾಯಕರು, ಜಿಲ್ಲೆಯ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಅ.4ರಿಂದ5 ರಿಂದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ಮಹಾತ್ಮಾ ಗಾಂಧಿ ಅವರ ಪಾದಯಾತ್ರೆ ಬಳಿಕ ಸುದೀರ್ಘ ಪಾದಯಾತ್ರೆ ನಡೆದಿದ್ದು ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಎಂದೂ ಅವರು ಹೇಳಿದರು. ಈ ವೇಳೆ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಸೇರಿದಂತೆ ಪ್ರಮುಖರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor