ಬೆಂಗಳೂರು : ರಾಜ್ಯ ಸರಕಾರವು ಪೊಲೀಸ್ ಇಲಾಖೆಯನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸುವ ಹಾಗೂ ಆಧುನಿಕ ತಂತ್ರಜ್ಞಾನಗಳ ಸಮರ್ಪಕ ಬಳಕೆಯೊಂದಿಗೆ ಇಲಾಖೆಯ ಕಾರ್ಯಕ್ಷಮತೆಯನ್ನು ಬಲಪಡಿಸುವ ಉದ್ದೇಶದಿಂದ ನಿವೃತ್ತ ಐಪಿಎಸ್ ಅಧಿಕಾರಿ ಎಂ.ಎನ್. ರೆಡ್ಡಿ ನೇತೃತ್ವದಲ್ಲಿ ಪೊಲೀಸ್ ಆಧುನೀಕರಣ ಸಮಿತಿಯನ್ನು ರಚಿಸಿದೆ.

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಂ.ಎನ್. ರೆಡ್ಡಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್. ಮುರುಗನ್, ಲೋಕಾಯುಕ್ತ ಪೊಲೀಸ್ ಮಹಾನಿರೀಕ್ಷಕ ಎ. ಸುಬ್ರಹ್ಮಣ್ಯೇಶ್ವರ ರಾವ್, ಉಪ ಪೊಲೀಸ್ ಮಹಾ ನಿರೀಕ್ಷಕಿ ದಿವ್ಯಾ ವಿ. ಗೋಪಿನಾಥ್ ಮತ್ತು ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಮಿತಿಯು ಸಮಗ್ರ ಅಧ್ಯಯನ ನಡೆಸಿ, ಅಗತ್ಯ ಶಿಫಾರಸುಗಳೊಂದಿಗೆ ಎರಡು ತಿಂಗಳೊಳಗೆ ವರದಿ ಸಲ್ಲಿಸಬೇಕಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಅಪರಾಧಗಳ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳು, ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆ, ಸೈಬರ್ ಅಪರಾಧಗಳ ಹೆಚ್ಚಳ ಹಾಗೂ ಹೊಸ ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಮೂಲಸೌಕರ್ಯ, ಸಂವಹನ ವ್ಯವಸ್ಥೆ, ಸೈಬರ್ ಸಾಮಥ್ರ್ಯ, ತರಬೇತಿ, ಪೊಲೀಸ್ ವಸತಿ ಮತ್ತು ಸಿಬ್ಬಂದಿ ಕಲ್ಯಾಣ ಸೇರಿದಂತೆ ಎಲ್ಲ ಆಯಾಮಗಳನ್ನು ಸಮಿತಿಯು ಸಮಗ್ರವಾಗಿ ಪರಿಶೀಲಿಸಲಿದೆ.

ಸಾರ್ವಜನಿಕರಿಗೆ ತುರ್ತು ಪ್ರತಿಕ್ರಿಯೆ ನೀಡುವ ವ್ಯವಸ್ಥೆ, ನಿಯಂತ್ರಣ ಕೊಠಡಿಗಳು ಹಾಗೂ 112 ಸೇವೆಗಳ ಉನ್ನತೀಕರಣ ಸಾಧ್ಯತೆಗಳನ್ನು ಸಮಿತಿ ಪರಿಶೀಲಿಸಲಿದೆ. ಜೊತೆಗೆ ವಿಧಿವಿಜ್ಞಾನ ಪ್ರಯೋಗಾಲಯದ ಬಲವರ್ಧನೆ, ಪೊಲೀಸ್ ಇಲಾಖೆಯ ವಾಹನಗಳು ಹಾಗೂ ಇತರೆ ಚಲನೆಯಲ್ಲಿರುವ ಸೌಲಭ್ಯಗಳ ಅಗತ್ಯತೆಗಳನ್ನೂ ಅಧ್ಯಯನ ಮಾಡಲಿದೆ.

ಪೊಲೀಸ್ ಇಲಾಖೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಸಾಧ್ಯತೆಗಳು, ಇಲಾಖೆಯ ವಿವಿಧ ಕಾರ್ಯಗಳ ಗಣಕೀಕರಣ, ಹಾರ್ಡ್‍ವೇರ್ ಮತ್ತು ಸಂಪರ್ಕ ಸಾಧನಗಳ ಅವಶ್ಯಕತೆ, ನಾಗರಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಪೊಲೀಸ್ ತರಬೇತಿ ಅಕಾಡೆಮಿಗಳ ಸ್ಥಾಪನೆ, ಕಾನೂನು ಮತ್ತು ಸುವ್ಯವಸ್ಥೆಗಾಗಿ ಆಧುನಿಕ ಪರಿಕರಗಳು ಹಾಗೂ ವ್ಯವಸ್ಥೆಗಳ ಅಳವಡಿಕೆ ಕುರಿತು ಸಮಿತಿ ಪರಿಶೀಲನೆ ನಡೆಸಲಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor