ರಾಜ್ಯದ ನೀರಾವರಿ ಯೋಜನೆಗಳಿಗೆ ತ್ವರಿತ ಅನುಮತಿ ಮತ್ತು ಕೇಂದ್ರದ ನೆರವು ಕೋರಿ ಸಿಎಂ ಡಿ.ಕೆ.ಶಿವಕುಮಾರ್ ಮನವಿ
ಹೊಸದಿಲ್ಲಿ : ರಾಜ್ಯದ ಕುಡಿಯುವ ನೀರು, ನೀರಾವರಿ ಹಾಗೂ ಬರ ನಿರ್ವಹಣೆಯ ಅಗತ್ಯಗಳನ್ನು ಪೂರೈಸಲು ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ತ್ವರಿತ ಅನುಮತಿ ನೀಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವರ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಮನವಿ ಪತ್ರ ಹಸ್ತಾಂತರಿಸಿದ ಶಿವಕುಮಾರ್, ಬಾಕಿ ಇರುವ ನೀರಾವರಿ ಸಂಬಂಧಿತ ವಿಷಯಗಳ ಬಗ್ಗೆ ಕೇಂದ್ರ ಸರಕಾರ ಶೀಘ್ರ ನಿರ್ಧಾರ ಕೈಗೊಳ್ಳುವುದು ಅತ್ಯಗತ್ಯ. ಕರ್ನಾಟಕಕ್ಕೆ ನ್ಯಾಯಸಮ್ಮತವಾಗಿ ಲಭ್ಯವಾಗಬೇಕಾದ ಜಲ ಸಂಪನ್ಮೂಲ ಪಾಲನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕೇಂದ್ರದ ತ್ವರಿತ ಮಧ್ಯಸ್ಥಿಕೆ ಅಗತ್ಯವಿದೆ ಎಂದು ಹೇಳಿದ್ದಾರೆ.
16,745 ಕೋಟಿ ರೂ.ಮೇಕೆದಾಟು ಯೋಜನೆ: 16,745 ಕೋಟಿ ರೂ. ವೆಚ್ಚದ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ಕೇಂದ್ರ ಜಲ ಆಯೋಗ ಶೀಘ್ರ ಪರಿಶೀಲಿಸಿ ಅನುಮೋದಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ರಾಜ್ಯ ಸರಕಾರವು ಆ.13ರಂದು ಅನುಸರಣೆ ವರದಿಯೊಂದಿಗೆ ಯೋಜನೆಯ ಡಿಆರ್‍ಆರ್ ಅನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದೆ. ಈ ಕುರಿತು ಕೇಂದ್ರ ಜಲ ಆಯೋಗದೊಂದಿಗೆ ರಾಜ್ಯ ಸರಕಾರ ನಿರಂತರವಾಗಿ ಸಂಪರ್ಕದಲ್ಲಿದ್ದು, ಕೇಂದ್ರ ಜಲ ಆಯೋಗ ಪರಿಶೀಲನೆಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸುವಂತೆ ಶಿವಕುಮಾರ್ ಕೋರಿದ್ದಾರೆ.
ಕೃಷ್ಣಾ ನ್ಯಾಯಮಂಡಳಿ ತೀರ್ಪಿನ ಅಧಿಸೂಚನೆಗೆ ಒತ್ತಾಯ: ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿ-2 ತೀರ್ಪಿನ ವಿಚಾರದಲ್ಲೂ ಕೇಂದ್ರ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು. ಜಲಶಕ್ತಿ ಸಚಿವಾಲಯವು ಸುಪ್ರೀಂ ಕೋರ್ಟ್‍ನಲ್ಲಿ ತನ್ನನ್ನು ತಾನು ಪಕ್ಷವಾಗಿ ಸೇರಿಸಿಕೊಂಡು ನ್ಯಾಯಮಂಡಳಿ ತೀರ್ಪನ್ನು ಶೀಘ್ರವಾಗಿ ಗೆಜೆಟ್‍ನಲ್ಲಿ ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಈ ಪ್ರಕರಣ ಸೆ.23ರಂದು ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಗೆ ಬಂದಿದ್ದು, ಬಾಕಿ ಇರುವ ಸಿವಿಲ್ ಮೇಲ್ಮನವಿಗಳೊಂದಿಗೆ ನ.4ಕ್ಕೆ ಮುಂದೂಡಲಾಗಿದೆ. ತೀರ್ಪು ಶೀಘ್ರ ಅಧಿಸೂಚನೆಯಾದರೆ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರಿನ ಪಾಲನ್ನು ಬಳಸಿಕೊಳ್ಳಲು ಹಾಗೂ ಅದಕ್ಕೆ ಸಂಬಂಧಿಸಿದ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ನೆರವು: ಭದ್ರಾ ಮೇಲ್ದಂಡೆ ಯೋಜನೆಗೆ 21,167.93 ಕೋಟಿ ರೂ.ಗಳ ಪರಿಷ್ಕೃತ ವೆಚ್ಚ ಅಂದಾಜುವನ್ನು ಪ್ರಸಕ್ತ ಸಾಲಿನ ಮಾ.20ರಂದು ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿ ಸಭೆಯಲ್ಲಿ ಪರಿಶೀಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಸೇರಿಸುವಂತೆ 16ನೆ ಹಣಕಾಸು ಆಯೋಗಕ್ಕೆ ಶಿಫಾರಸು ಮಾಡುವಂತೆ ಕೇಂದ್ರ ಸಚಿವರನ್ನು ಕೋರಿರುವ ಶಿವಕುಮಾರ್, 2023-24ರ ಕೇಂದ್ರ ಬಜೆಟ್‍ನಲ್ಲಿ ಘೋಷಿಸಿದಂತೆ ಈ ಯೋಜನೆಗೆ ಕೇಂದ್ರದ ನೆರವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸಕಾಲದಲ್ಲಿ ಹಣಕಾಸು ನೆರವು ದೊರೆತರೆ ಯೋಜನೆಯ ವೇಗವನ್ನು ಕಾಯ್ದುಕೊಳ್ಳುವುದರ ಜೊತೆಗೆ ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಯೋಜನೆಯ ಪ್ರಯೋಜನ ತಲುಪಿಸಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಪಿಎಂಕೆಎಸ್‍ವೈ, ಪ್ರವಾಹ ನಿರ್ವಹಣಾ ಯೋಜನೆಗಳಿಗೂ ಅನುಮತಿ: ರಾಜ್ಯವು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ(ಪಿಎಂಕೆಎಸ್‍ವೈ) ಹಾಗೂ ಪ್ರವಾಹ ನಿರ್ವಹಣಾ ಯೋಜನೆಗಳ ಅಡಿಯಲ್ಲಿ ನೀರಾವರಿ ಅಭಿವೃದ್ಧಿ, ಜಲ ಮೂಲಸೌಕರ್ಯ ಆಧುನೀಕರಣ, ಪ್ರವಾಹ ನಿಯಂತ್ರಣ ಮತ್ತು ಇತರ ಜಲ ನಿರ್ವಹಣಾ ಕ್ರಮಗಳಿಗೆ ಸಂಬಂಧಿಸಿದ ಹಲವು ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸಿದೆ.
ಈ ಪ್ರಸ್ತಾವನೆಗಳ ಪರಿಶೀಲನೆಯನ್ನು ಕೇಂದ್ರ ಜಲ ಆಯೋಗ ತ್ವರಿತವಾಗಿ ಪೂರ್ಣಗೊಳಿಸಿ ಅಗತ್ಯ ಅನುಮತಿಗಳನ್ನು ನೀಡಬೇಕು. ಇದರಿಂದ ಕೇಂದ್ರದ ಹಣಕಾಸು ನೆರವನ್ನು ಕರ್ನಾಟಕ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ.
ಗೋದಾವರಿ-ಕಾವೇರಿ, ಬೇಡ್ತಿ-ವರದಾ ನದಿ ಯೋಜನೆ: ಗೋದಾವರಿ-ಕಾವೇರಿ ನದಿ ಸಂಪರ್ಕ ಯೋಜನೆ ಹಾಗೂ ಬೇಡ್ತಿ-ವರದಾ (ಹಿರೇವಡಟ್ಟಿ) ಸಂಪರ್ಕ ಯೋಜನೆಗಳ ಕುರಿತು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ಕರ್ನಾಟಕ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಕೆಲವು ಪ್ರಮುಖ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರಕಾರ ತಿಳಿಸಿದೆ.
ವಿಶೇಷವಾಗಿ, ಯೋಜನೆಯಲ್ಲಿ ಕರ್ನಾಟಕಕ್ಕೆ ಪ್ರಸ್ತಾಪಿಸಲಾಗಿರುವ ನೀರಿನ ಪಾಲನ್ನು ಮರುಪರಿಶೀಲಿಸುವಂತೆ ರಾಜ್ಯ ಸರಕಾರ ಒತ್ತಾಯಿಸಿದೆ. ಇತರ ಫಲಾನುಭವಿ ರಾಜ್ಯಗಳಿಗೆ ಪ್ರಸ್ತಾಪಿಸಿರುವ ಹಂಚಿಕೆಯ ರೀತಿಯಲ್ಲೇ ಕರ್ನಾಟಕಕ್ಕೂ ನ್ಯಾಯಸಮ್ಮತ ಪಾಲು ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕೃಷ್ಣಾ ಮತ್ತು ಕಾವೇರಿ ನದಿ ಜಲಾನಯನ ಪ್ರದೇಶಗಳಲ್ಲಿ ಕರ್ನಾಟಕದ ಅಗತ್ಯತೆಗಳು ಹಾಗೂ ಹಿತಾಸಕ್ತಿಗಳನ್ನು ಪರಿಗಣಿಸಿ ನೀರಿನ ಹಂಚಿಕೆ ಮಾಡಬೇಕು. ಕರ್ನಾಟಕದ ನೀರಾವರಿ ಮತ್ತು ಕುಡಿಯುವ ನೀರಿನ ಮೂಲಸೌಕರ್ಯಗಳ ದೀರ್ಘಕಾಲೀನ ಅಭಿವೃದ್ಧಿಗೆ ಈ ಎಲ್ಲ ಯೋಜನೆಗಳು ಮಹತ್ವದ್ದಾಗಿದ್ದು, ಜಲಶಕ್ತಿ ಸಚಿವಾಲಯ, ಕೇಂದ್ರ ಜಲ ಆಯೋಗ ಹಾಗೂ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಈ ಎಲ್ಲ ವಿಷಯಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ.