ಪೊಲೀಸ್ ನೇಮಕಾತಿ ನಿಯಮ ಪರಿಶೀಲನೆಗೆ ಕಮಲ್ ಪಂತ್ ನೇತೃತ್ವದಲ್ಲಿ ಸಮಿತಿ
ಸಾಂದರ್ಭಿಕ ಚಿತ್ರ
ಬೆಂಗಳೂರು : ಪೊಲೀಸ್ ಇಲಾಖೆಯ ಪ್ರಸ್ತುತ ಕಾರ್ಯಭಾರ, ಬದಲಾಗುತ್ತಿರುವ ಕರ್ತವ್ಯಗಳು ಹಾಗೂ ಭವಿಷ್ಯದಲ್ಲಿ ಎದುರಾಗಲಿರುವ ಅಗತ್ಯಗಳಿಗೆ ಅನುಗುಣವಾಗಿ ಇಲಾಖೆಯ ವೃಂದ ರಚನೆ, ಹುದ್ದೆಗಳ ವರ್ಗೀಕರಣ, ಹುದ್ದೆಗಳ ಸಂಖ್ಯೆ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಶಿಫಾರಸು ನೀಡಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಸಮಿತಿಯ ಅಧ್ಯಕ್ಷರಾಗಿದ್ದು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೌಮೇಂದು ಮುಖರ್ಜಿ, ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಇನ್‍ಸ್ಪೆಕ್ಟರ್ ಜನರಲ್ ಚೇತನ್ ಸಿಂಗ್ ರಾಠೋಡ್ ಹಾಗೂ ಬೆಂಗಳೂರು ನಗರ ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಸಮಿತಿಯ ಸದಸ್ಯರಾಗಿದ್ದಾರೆ.
ಪೊಲೀಸ್ ಇಲಾಖೆಯ ಕರ್ತವ್ಯಗಳ ಸ್ವರೂಪದಲ್ಲಿ ನಿರಂತರ ಬದಲಾವಣೆಗಳಾಗುತ್ತಿದ್ದು, ಹೊಸ ಸವಾಲುಗಳು ಮತ್ತು ಹೆಚ್ಚುತ್ತಿರುವ ಜವಾಬ್ದಾರಿಗಳಿಗೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ವೃಂದ ರಚನೆ ಹಾಗೂ ಹುದ್ದೆಗಳ ಮಂಜೂರಾತಿ ಬಲವನ್ನು ಸಮಗ್ರವಾಗಿ ಪರಿಶೀಲಿಸುವುದರ ಜೊತೆಗೆ, ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಇಲಾಖೆಯ ಮಾನವ ಸಂಪನ್ಮೂಲ ಯೋಜನೆಯನ್ನು ರೂಪಿಸುವ ಉದ್ದೇಶದಿಂದ ಈ ಸಮಿತಿ ರಚಿಸಲಾಗಿದೆ.
ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆ ಹಾಗೂ ಅರ್ಹತಾ ಮಾನದಂಡಗಳನ್ನು ಪುನರ್ ನಿಗದಿಪಡಿಸುವುದು, ತರಬೇತಿ ಮತ್ತು ಸಾಮಥ್ರ್ಯವೃದ್ಧಿ ವ್ಯವಸ್ಥೆಯನ್ನು ಬಲಪಡಿಸುವುದು ಸೇರಿದಂತೆ ಪೊಲೀಸ್ ಸಿಬ್ಬಂದಿಯ ವೃತ್ತಿಪರ ಬೆಳವಣಿಗೆಗೆ ಅಗತ್ಯ ಕ್ರಮಗಳ ಕುರಿತು ಸಮಿತಿ ಪರಿಶೀಲನೆ ನಡೆಸಲಿದೆ. ವಿವಿಧ ಹಂತದ ಹುದ್ದೆಗಳಲ್ಲಿ ಬಡ್ತಿ ಅವಕಾಶ, ವೃತ್ತಿಜೀವನದ ಪ್ರಗತಿ ಹಾಗೂ ಹುದ್ದೆಗಳ ಚಲನಶೀಲತೆಯನ್ನು ಪರಿಶೀಲಿಸುವುದರ ಜೊತೆಗೆ, ಹೊಸ ಹುದ್ದೆಗಳ ಸೃಜನೆ ಮತ್ತು ಅಸ್ತಿತ್ವದಲ್ಲಿರುವ ಹುದ್ದೆಗಳ ಪುನರ್ ವರ್ಗೀಕರಣದ ಅಗತ್ಯವಿದೆಯೇ ಎಂಬುದನ್ನೂ ಸಮಿತಿ ಪರಿಶೀಲಿಸಲಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಸಮಿತಿಗೆ ಎರಡು ತಿಂಗಳ ಕಾಲಾವಧಿ ನಿಗದಿಪಡಿಸಲಾಗಿದ್ದು, ಪೊಲೀಸ್ ಇಲಾಖೆಯ ವೃಂದ ಮತ್ತು ನೇಮಕಾತಿಗೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಅಗತ್ಯ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.