ಬೆಂಗಳೂರು : ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‍ಐಆರ್)ಪ್ರಕ್ರಿಯೆ ಸಂಬಂಧ ‘ದಿ ಇಂಡಿಯನ್ ಎಕ್ಸ್‌ ಪ್ರೆಸ್’ ಪ್ರಕಟಿಸಿರುವ ತನಿಖಾ ವರದಿಯಲ್ಲಿನ ಅಂಶಗಳ ಬಗ್ಗೆ ಹೊಸದಿಲ್ಲಿಯ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ(ಸಿಬಿಸಿಐ) ಕಳವಳ ವ್ಯಕ್ತಪಡಿಸಿದೆ.

ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಬಿಸಿಐ, ಯಾವುದೇ ಅರ್ಹ ಮತದಾರರು ತಮ್ಮ ಸಂವಿಧಾನಾತ್ಮಕ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು. ಎಸ್‍ಐಆರ್ ಪ್ರಕ್ರಿಯೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ನಡೆಸುವ ಮೂಲಕ ಅರ್ಹ ನಾಗರಿಕರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಚುನಾವಣಾ ಆಯೋಗ ಖಾತರಿಪಡಿಸಬೇಕು ಎಂದು ಆಗ್ರಹಿಸಿದೆ.

ಮತದಾನದ ಹಕ್ಕಿನಿಂದ ವಂಚಿತರಾಗುವ ಪರಿಸ್ಥಿತಿ ಸಾಮಾನ್ಯ ಸಂಗತಿಯಾಗಬಾರದು. ಇಂತಹ ಬೆಳವಣಿಗೆಯು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿಯಾಗಲಿದೆ. ಯಶಸ್ವಿ ಪ್ರಜಾಪ್ರಭುತ್ವದ ಪ್ರಮುಖ ಆಧಾರವೆಂದರೆ ಚುನಾವಣಾ ಸಂಸ್ಥೆಗಳ ಮೇಲೆ ಸಾರ್ವಜನಿಕರು ಹೊಂದಿರುವ ಸಂಪೂರ್ಣ ವಿಶ್ವಾಸ ಎಂದು ಸಿಬಿಸಿಐ ಹೇಳಿದೆ.

ಚುನಾವಣಾ ಸಂಸ್ಥೆಗಳ ಮೇಲಿನ ಸಾರ್ವಜನಿಕ ವಿಶ್ವಾಸಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಪ್ರಮುಖ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕನ ಧ್ವನಿಯೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು. ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಪ್ರತಿಯೊಂದು ಹಂತದಲ್ಲೂ ರಕ್ಷಿಸಬೇಕು. ಆದುದರಿಂದ, ಚುನಾವಣಾ ಆಯೋಗವು ಯಾವುದೇ ರೀತಿಯ ಪಕ್ಷಪಾತ ಅಥವಾ ರಾಜಕೀಯ ಒಲವಿನ ಆರೋಪಗಳಿಗೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಿಸಬೇಕು ಎಂದು ಸಿಬಿಸಿಐ ಒತ್ತಾಯಿಸಿದೆ.

ಇದೇ ವೇಳೆ, ತಮ್ಮ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಯ ರಕ್ಷಣೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಎಲ್ಲರಿಗೂ ಬೆಂಬಲ ವ್ಯಕ್ತಪಡಿಸಿರುವ ಸಿಬಿಸಿಐ, ಪ್ರತಿಭಟನಾಕಾರರು ಹಿಂಸಾಚಾರದಿಂದ ದೂರವಿದ್ದು, ತಮ್ಮ ಪ್ರತಿಭಟನೆಗಳನ್ನು ಶಾಂತ ರೀತಿಯಲ್ಲೇ ಮುಂದುವರಿಸುವಂತೆ ಮನವಿ ಮಾಡಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor