ಅಕ್ರಮವಾಗಿ ಅಧಿಕಾರಕ್ಕೆ ಬಂದು ಅನೈತಿಕವಾಗಿ ರಾಜ್ಯಭಾರ ಮಾಡುತ್ತಿರುವ ಕೇಂದ್ರ ಸರ್ಕಾರದ ಗೂಂಡಾಗಿರಿ ಮಿತಿ ಮೀರಿದೆ: ಶಿವರಾಜ ಎಸ್. ತಂಗಡಗಿ
"ಮೋ-ಶಾ ಜೋಡಿಗೆ ಅಧಿಕಾರ ಕಳೆದುಕೊಳ್ಳುವ ಭಯ ಶುರುವಾಗಿದೆ"
ಬೆಂಗಳೂರು: ಮತದಾರರ ಹಕ್ಕು ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗಾಗಿ ಆಗ್ರಹಿಸಿದ ರಾಹುಲ್ ಗಾಂಧಿ ಅವರ ಬಂಧನ ಹಾಗೂ ದೈಹಿಕ ಹಿಂಸೆ ಅತ್ಯಂತ ಖಂಡನೀಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಅವರು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಚುನಾವಣೆಯಲ್ಲಿ ಜನಾದೇಶ ತಿರುಚಿ ಅಕ್ರಮವಾಗಿ ಅಧಿಕಾರಕ್ಕೆ ಬಂದು ಅನೈತಿಕವಾಗಿ ರಾಜ್ಯಭಾರ ಮಾಡುತ್ತಿರುವ ಕೇಂದ್ರ ಸರ್ಕಾರದ ಗೂಂಡಾಗಿರಿ ಮಿತಿ ಮೀರಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ದಮನಕ್ಕೆ ಮುಂದಾಗಿರುವ ಮೋದಿ ಸರ್ವಾಧಿಕಾರಿ ಆಡಳಿತಕ್ಕೆ ಧಿಕ್ಕಾರವಿರಲಿ ಎಂದಿದ್ದಾರೆ.
ಜನಾದೇಶದಿಂದ ಆಯ್ಕೆಯಾದ ಪ್ರತಿಪಕ್ಷಗಳ ಜನಪ್ರತಿನಿಧಿಗಳನ್ನು ಐಟಿ-ಇಡಿ ಬ್ಲ್ಯಾಕ್ ಮೇಲ್, ಆಮಿಷಗಳಿಂದ ಸೆಳೆಯುತ್ತಿದ್ದ ಕೇಂದ್ರ ಸರ್ಕಾರ ಬಳಿಕ ಪ್ರತಿಪಕ್ಷಗಳನ್ನೇ ನಿರ್ನಾಮ ಮಾಡಿ ಜನಾದೇಶವನ್ನೇ ಹೈಜಾಕ್ ಮಾಡುತ್ತಿತ್ತು. ಇದೀಗ ಇನ್ನೂ ಕೆಳಮಟ್ಟಕ್ಕೆ ಇಳಿದು ಎಸ್ಐಆರ್ ಹಾಗೂ ಚುನಾವಣಾ ಆಯೋಗದ ದುರುಪಯೋಗದ ಮೂಲಕ ಜನರ ಮತ ಹಕ್ಕನ್ನೇ ಕಸಿಯುತ್ತಿದೆ ಎಂದು ಆರೋಪಿಸಿದ್ದಾರೆ.
"ಈ ಅಕ್ರಮ, ಅನೈತಿಕ ಚಟುವಟಿಕೆ ವಿರುದ್ಧ, ಮತದಾರರ ಹಕ್ಕು ಉಳಿಸಲು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೋರಾಟಕ್ಕೆ ಇಳಿದಿದ್ದಾರೆ. ಕೇಂದ್ರ ಇಂತಹ ಹೋರಾಟವನ್ನು ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದೆ. ರಾಹುಲ್ ಗಾಂಧಿ ಅವರನ್ನು ಬಂಧಿಸುವ ವೇಳೆ ಎಳೆದಾಡಿ, ದೈಹಿಕವಾಗಿ ಹಿಂಸೆ ಕೊಟ್ಟು ನಡೆಸಿಕೊಂಡ ರೀತಿ ಅತ್ಯಂತ ಖಂಡನೀಯ. ಈ ರೀತಿಯ ದೈಹಿಕ ಹಿಂಸೆ ಮತ್ತು ಬಲಪ್ರಯೋಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಳಿದ ಕಪ್ಪು ಮಸಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನದ್ರೋಹಿ ಅಕ್ರಮ ವಿರೋಧಿಸುವುದು, ಪ್ರಶ್ನಿಸುವುದು ಮತ್ತು ಪ್ರತಿಭಟಿಸುವುದು ಸಂವಿಧಾನಬದ್ಧ ಹಕ್ಕು. ಬಲಪ್ರಯೋಗದ ಮೂಲಕ ಈ ಹಕ್ಕನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಮೋ-ಶಾ ಜೋಡಿಗೆ ಅಧಿಕಾರ ಕಳೆದುಕೊಳ್ಳುವ ಭಯ ಶುರುವಾಗಿದೆ. ಹೀಗಾಗಿ ಸರ್ವಾಧಿಕಾರಿ ವರ್ತನೆ ಮೂಲಕ ಬಲಪ್ರಯೋಗ ಮತ್ತು ಬೆದರಿಕೆಗಳ ಮೊರೆ ಹೋಗಿದ್ದಾರೆ. ರಾಹುಲ್ ಗಾಂಧಿ ಅವರನ್ನು ದೈಹಿಕವಾಗಿ ತಡೆದಿರಬಹುದು. ಆದರೆ ಪ್ರಜಾಪ್ರಭುತ್ವ ಉಳಿಸುವ ಅವರ ಛಲವನ್ನು ಕುಗ್ಗಿಸಲು ಸಾಧ್ಯವಿಲ್ಲ. ಅವರ ಧ್ವನಿಯನ್ನು ಅಡಗಿಸುವುದು ಅಸಾಧ್ಯ ಎಂದು ಹೇಳಿದ್ದಾರೆ.