ಪಿ.ಎಂ.ನರೇಂದ್ರ ಸ್ವಾಮಿ

ಬೆಂಗಳೂರು : ಕೃಷಿ ಇಲಾಖೆಯ ಜಾಗೃತ ಕೋಶವು ನಿಯಮ ಉಲ್ಲಂಘಿಸಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಾಡುತ್ತಿದ್ದ ಜಾಲದ ವಿರುದ್ಧ ರಾಜ್ಯಾದ್ಯಂತ ಕಠಿಣ ಕ್ರಮ ಕೈಗೊಂಡಿದೆ. 2026-27ನೆ ಸಾಲಿನ ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 10.32 ಕೋಟಿ ರೂ. ಮೌಲ್ಯದ ಬಿತ್ತನೆ ಬೀಜ (330 ಕ್ವಿಂಟಾಲ್), ರಸಗೊಬ್ಬರ (1,114 ಮೆ.ಟನ್) ಹಾಗೂ ಕೀಟನಾಶಕ (9,005 ಲೀ) ವಶಪಡಿಸಿಕೊಂಡು 273 ಪ್ರಕರಣಗಳನ್ನು ದಾಖಲಿಸಿದೆ.

ಇವುಗಳ ಪೈಕಿ 58 ಪ್ರಕರಣಗಳಲ್ಲಿ ಅಂತಿಮ ತೀರ್ಪು ಬಂದಿದ್ದು, 18.23 ಲಕ್ಷ ರೂ. ದಂಡ ವಿಧಿಸಲಾಗಿದೆ. ಅಕ್ರಮವಾಗಿ ಜೈವಿಕ ಉತ್ಪನ್ನ ಹೊಂದಿದ ಆರೋಪದಡಿ 7 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲಾಗಿದೆ. ಒಟ್ಟು 46 ಪರವಾನಗಿಗಳನ್ನು ಅಮಾನತು ಮಾಡಲಾಗಿದ್ದು, 3 ಪರವಾನಗಿಗಳನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಜೊತೆಗೆ ಸ್ವೀಕೃತವಾದ ದೂರುಗಳ ಪೈಕಿ 37 ದೂರುಗಳನ್ನು ಇತ್ಯರ್ಥಪಡಿಸಿ ಸರಕಾರಕ್ಕೆ ತನಿಖಾ ವರದಿ ಸಲ್ಲಿಸಲಾಗಿದೆ.

4 ವರ್ಷಗಳಲ್ಲಿ 42.57 ಕೋಟಿ ರೂ. ಜಪ್ತಿ: ಕೃಷಿ ಇಲಾಖೆಯ ಜಾಗೃತ ಕೋಶವು 4 ವರ್ಷಗಳಲ್ಲಿ (2023-24 ರಿಂದ 2026-27) ಒಟ್ಟು 42.57 ಕೋಟಿ ರೂ. ಮೌಲ್ಯದ ಕೃಷಿ ಪರಿಕರಗಳನ್ನು ಜಪ್ತಿ ಮಾಡಿದ್ದು, ನ್ಯಾಯಾಲಯದಲ್ಲಿ ಒಟ್ಟು 1,420 ಪ್ರಕರಣಗಳನ್ನು ದಾಖಲಿಸಿದೆ.

ಅನಧಿಕೃತವಾಗಿ ಬಿತ್ತನೆ ಬೀಜ ಮಾರಾಟ ಮಾಡಿದವರ ವಿರುದ್ಧ 124 ಪ್ರಕರಣ ದಾಖಲಿಸಿ, 3.06 ಕೋಟಿ ರೂ. ಮೌಲ್ಯದ 1,603 ಕ್ವಿಂಟಾಲ್ ಬಿತ್ತನೆ ಬೀಜ ಜಪ್ತಿ ಮಾಡಲಾಗಿದೆ. ರಸಗೊಬ್ಬರ ಮಾರಾಟಗಾರರ ವಿರುದ್ಧ 582 ಪ್ರಕರಣಗಳನ್ನು ದಾಖಲು ಮಾಡಿ, 22.43 ಕೋಟಿ ರೂ. ಮೌಲ್ಯದ 4,505 ಮೆಟ್ರಿಕ್ ಟನ್ ರಸಗೊಬ್ಬರ ಜಪ್ತಿ ಮಾಡಲಾಗಿದೆ.

ನಿಯಮಬಾಹಿರವಾಗಿ ಕೀಟನಾಶಕ ಮಾರಾಟ ಮಾಡಿದವರ ವಿರುದ್ಧ 714 ಪ್ರಕರಣಗಳನ್ನು ದಾಖಲಿಸಿ, 17.08 ಕೋಟಿ ರೂ. ಮೌಲ್ಯದ 6,39,288 ಲೀ. ಜಪ್ತಿ ಮಾಡಲಾಗಿದೆ. ಜಾಗೃತ ಕೋಶದಿಂದ ದಾಖಲಿಸಲಾದ 378 ಪ್ರಕರಣಗಳಲ್ಲಿ ನ್ಯಾಯಾಲಯವು ಅಂತಿಮ ತೀರ್ಪು ನೀಡಿದ್ದು, ತಪ್ಪು ಎಸಗಿದ ಉತ್ಪಾದಕರು ಹಾಗೂ ಮಾರಾಟಗಾರರಿಗೆ 1.02 ಕೋಟಿ ರೂ. ದಂಡ ವಿಧಿಸಲಾಗಿದೆ.

ಜೈವಿಕ ಉತ್ಪನ್ನಗಳಲ್ಲಿ ಅಕ್ರಮವಾಗಿ ಕೀಟನಾಶಕ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ 105 ಪ್ರಕರಣಗಳನ್ನು ದಾಖಲಿಸಲಾಗಿದೆ. ನಿಯಮ ಉಲ್ಲಂಘಿಸಿದ 181 ಪರವಾನಗಿಗಳನ್ನು ಅಮಾನತು ಮಾಡಲಾಗಿದ್ದು, 117 ಪರವಾನಗಿಗಳನ್ನು ರದ್ದುಪಡಿಸಲಾಗಿದೆ. ವಿವಿಧ ಮೂಲಗಳಿಂದ ಒಟ್ಟು 1,088 ದೂರುಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 1,028 ದೂರುಗಳನ್ನು ಇತ್ಯರ್ಥಪಡಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. 60 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ ಎಂದು ಕೃಷಿ ಇಲಾಖೆ ಸಚಿವಾಲಯ ವಿಭಾಗದ ಜಾಗೃತ ಕೋಶದ ಪ್ರಕಟಣೆ ತಿಳಿಸಿದೆ.

‘ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಾಗೂ ಕೃಷಿ ಇಲಾಖೆ ರೈತರ ನೆರವಿಗೆ ಧಾವಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ರೈತರಿಗೆ ಆರ್ಥಿಕ ಚೈತನ್ಯ ನೀಡಲು ಇನ್‍ಪುಟ್ ಸಬ್ಸಿಡಿ ನೀಡುತ್ತಿದೆ. ಬರದಿಂದ ರೈತರ ಆದಾಯ ಕುಸಿಯುತ್ತಿರುವುದನ್ನು ಮನಗಂಡು ರಾಜ್ಯ ಸರಕಾರ ನ.1 ರಿಂದ ಮುಖ್ಯಮಂತ್ರಿಗಳ ನೇಗಿಲ ಯೋಜನೆ ಜಾರಿಗೆ ತರುತ್ತಿದೆ. ಆ ಮೂಲಕ ರೈತರ ಜಮೀನು ಉಳುಮೆಗೆ ಸರಕಾರವೆ ನೆರವಾಗಲಿದೆ. ಆದರೆ, ಬರ ಪರಿಸ್ಥಿತಿಯನ್ನೆ ನೆಪ ಮಾಡಿಕೊಂಡು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕವನ್ನು ಕಾಳಸಂತೆಯಲ್ಲಿ ಅಥವಾ ನಿಯಮಬಾಹಿರವಾಗಿ ಮಾರಾಟ ಮಾಡಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’

-ಪಿ.ಎಂ.ನರೇಂದ್ರ ಸ್ವಾಮಿ, ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor