ಕಾಂಗ್ರೆಸ್ ದುರಾಡಳಿತ ಮೇರೆ ಮೀರಿದೆ : ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ಕಾಂಗ್ರೆಸ್ ದುರಾಡಳಿತ ಮೇರೆ ಮೀರಿದೆ. ಕಾಂಗ್ರೆಸ್ ಎಂದರೆ ಕಮಿಷನ್, ಕರಪ್ಶನ್, ಲೂಟಿ ಎಂದು ಮಾತನಾಡುತ್ತಿದ್ದೆವು. ಕಾಂಗ್ರೆಸ್ ಇದೀಗ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಅಧಿಕಾರವೊಂದಿದ್ದರೆ ಸಾಕು; ಏನು ಬೇಕಾದರೂ ಮಾಡಬಹುದು. ಹೇಗೆ ಬೇಕಾದರೂ ಮೆರೆಯಬಹುದು ಎಂಬ ದುರ್ನಡತೆಯನ್ನು ಮೈಗೂಡಿಸಿಕೊಂಡಂತೆ ಕಾಣುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೊರದೇಶದಿಂದ ಪ್ರವಾಸಕ್ಕಾಗಿ ಬಂದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಇದೊಂದು ದೊಡ್ಡ ವಿಷಯವಾಗಿತ್ತು. ಇದು ಕೇವಲ ರಾಷ್ಟ್ರೀಯ ವಿಚಾರವಲ್ಲ; ಅಂತರರಾಷ್ಟ್ರೀಯ ವಿಚಾರ. ಇದನ್ನು ಗೌರವಾನ್ವಿತ ಎಂಪಿ (ಸಂಸದ) ರಾಜಶೇಖರ ಹಿಟ್ನಾಳ್ ಅವರು ಎಷ್ಟು ಕೇವಲವಾಗಿ ಹೇಳಿದ್ದಾರೆಂದರೆ, ಅದೊಂದು ಸಣ್ಣ (ಮೈನರ್) ಘಟನೆಯಂತೆ. ಈ ಕಾಂಗ್ರೆಸ್ಸಿನ ಸಂಸ್ಕೃತಿ ಎಂಥದ್ದೆಂದು ಗೊತ್ತಾಯಿತಲ್ಲವೇ? ಎಂದು ಪ್ರಶ್ನಿಸಿದರು.
ಇಷ್ಟೊಂದು ನೀಚತನಕ್ಕೆ ಅಧಿಕಾರ ನಡೆಸುವವರು ಇಳಿದರೆ ಏನೆನ್ನಬೇಕು? ಒಬ್ಬರು ಮಹಿಳೆಯ ಮೇಲೆ ಆಗಿರುವ ಅತ್ಯಾಚಾರವನ್ನೇ ನಾವು ಖಂಡಿಸಬೇಕು. ಅದು ಸಣ್ಣ ವಿಷಯ ಎಂದು ಯಾರೂ ಭಾವಿಸಬಾರದು. ಅದರಲ್ಲೂ ಅವರನ್ನು ಕೊಲೆ ಮಾಡಿದ ಘಟನೆ; ಎಷ್ಟೊಂದು ನೀಚತನದಿಂದ ಕಾಂಗ್ರೆಸ್ಸಿನವರು ಈ ಮಾತುಗಳನ್ನು ಆಡಿದ್ದಾರೆಂದರೆ, ಅವರ ನೀಚತನಕ್ಕೆ ಜನರು ಉತ್ತರ ಕೊಡಬೇಕಿದೆ. ಬುದ್ಧಿ ಕಲಿಸುವ ಕೆಲಸ ಮಾಡಲೇಬೇಕಾಗಿದೆ ಎಂದು ಮನವಿ ಮಾಡಿದರು.
ಇವತ್ತು ಕರ್ನಾಟಕವೇ ದೇಶದ ಮುಂದೆ ತಲೆತಗ್ಗಿಸುವ ಕೆಲಸವನ್ನು ರಾಜಶೇಖರ ಹಿಟ್ನಾಳ್ ಅವರು ಮಾಡಿದ್ದಾರೆ. ಮೊದಲು ಅವರು ಕ್ಷಮೆ ಕೇಳಬೇಕು. ಕಾಂಗ್ರೆಸ್ ಪಕ್ಷ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು. ಅವರನ್ನು ಉಚ್ಚಾಟಿಸಿದರೆ ನಿಮ್ಮ ಪಕ್ಷ ಮಹಿಳೆಯರಿಗೆ ಗೌರವ ಕೊಡುತ್ತದೆ. ಇಂಥ ವಿಷಯದಲ್ಲಿ ಗಂಭೀರತೆ ಹೊಂದಿದೆ ಎಂದು ತಿಳಿಸಬಹುದು. ಇಲ್ಲವಾದರೆ, ನಿಮ್ಮ ಯೋಗ್ಯತೆ ಅಷ್ಟೇ ಎಂಬುದನ್ನು ನಾವು ಹೇಳಲೇಬೇಕಾಗುತ್ತದೆ ಎಂದು ನುಡಿದರು.
ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಮಾಜಿ ಸಚಿವ ಎನ್.ಮಹೇಶ್ ಅವರು ಭಾಗವಹಿಸಿದ್ದರು.