×
Ad

16 ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಆರೈಕೆ ಕೇಂದ್ರಗಳ ಸ್ಥಾಪನೆ : ಸಿಎಂ ಸಿದ್ದರಾಮಯ್ಯ

Update: 2025-05-24 00:51 IST

ಮೈಸೂರು : ಹೆಚ್ಚು ಅನುಭವ ಹಾಗೂ ಹೆಚ್ಚು ಪರಿಣತಿ ಇರುವ ವೈದ್ಯರು ಸರಕಾರಿ ಆಸ್ಪತ್ರೆಗಳಲ್ಲಿ ಇದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೇಟಗಳ್ಳಿ ಜಿಲ್ಲಾ ಆಸ್ಪತ್ರೆಯಲ್ಲಿ ಕಿಮೋಥೆರಪಿ ಆರೈಕೆ ಕೇಂದ್ರಗಳ ಉದ್ಘಾಟನೆಯನ್ನು ಶುಕ್ರವಾರ ನೆರವೇರಿಸಿ ಅವರು ಮಾತನಾಡಿದರು. ಕರ್ನಾಟಕದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಮೈಸೂರಿನಲ್ಲಿ 20 ಬೆಡ್‌ಗಳ ಹಾಗೂ ಇತರೆಡೆ 10 ಬೆಡ್‌ಗಳ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳನ್ನು ಕಳೆದ ವರ್ಷದ ಬಜೆಟ್‌ನ ಲ್ಲಿ ಘೋಷಣೆ ಮಾಡಲಾಗಿತ್ತು. ಹಲವು ಜನ ಕ್ಯಾನ್ಸರ್ ಚಿಕಿತ್ಸೆಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಿತ್ತು. ಇದನ್ನು ತಪ್ಪಿಸಲು ಕಿಮೋಥೆರಪಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಅನೇಕ ಬಡಜನರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಪರದಾಡುತ್ತಾರೆ. ಅವರಿಗೆ ಚಿಕಿತ್ಸೆ ಕೊಡಿಸಲು ಹಣ ಇರುವುದಿಲ್ಲ. ಆದ್ದರಿಂದ ಕ್ಯಾನ್ಸರ್ ಚಿಕಿತ್ಸೆ ಕಿದ್ವಾಯಿ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ನಗರದಲ್ಲಿ ಸ್ಥಾಪಿಸಲಾಗುವುದು. ಕ್ಯಾನ್ಸರ್ ರೋಗವು ನಾವು ಬಳಸುವ ಆಹಾರ, ನಮ್ಮ ಜೀವನ ಶೈಲಿಯಿಂದ ಬರುತ್ತದೆ. ಬಡವರು ಕ್ಯಾನ್ಸರ್ ಚಿಕಿತ್ಸೆಗೆ ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯುವುದು ಬಹಳ ಕಷ್ಟ ಆಗುತ್ತಿತ್ತು. ಇದನ್ನು ಮನಗಂಡು 16 ಜಿಲ್ಲಾ ಆಸ್ಪತ್ರೆಗಳಲ್ಲಿ 10 ಬೆಡ್‌ನ ಕಿಮೋಥೆರಪಿ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಕೆ.ಹರೀಶ್ ಗೌಡ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ನವೀನ್ ಭಟ್, ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಡಾ.ಯತಿಂದ್ರ ಸಿದ್ದರಾಮಯ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯ್ಯೂಬ್ ಖಾನ್, ಜಿಲ್ಲಾಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಕಾರಿ ಎಸ್.ಯುಕೇಶ್ ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಇತರರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಪ್ರತೀ ವರ್ಷ 70 ಸಾವಿರ ಮಂದಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇವರೆಲ್ಲಾ ಚಿಕಿತ್ಸೆ ಪಡೆಯಲು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋಗಬೇಕಿತ್ತು. ಇವರಿಗೆ ಹತ್ತಿರದಲ್ಲಿ ಚಿಕಿತ್ಸೆ ನೀಡಲು 16 ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇಂದ್ರಗಳನ್ನು ತೆರೆಯಲಾಗಿದೆ. ಕಿಮೋಥೆರಪಿ ಚಿಕಿತ್ಸೆ ಪಡೆದು 10, 15, ವರ್ಷ ಬದುಕಿದ್ದಾರೆ. ಕ್ಯಾನ್ಸರ್ ಬಂದರೆ ಯಾರು ದೃತಿಗೆಡಬಾರದು. ಪ್ರತಿಯೊಬ್ಬರೂ ವರ್ಷಕ್ಕೆ ಒಂದು ಬಾರಿ ಆದರೂ ದೇಹವನ್ನು ಪೂರ್ಣ ತಪಾಸಣೆ ಮಾಡಿಸಿಕೊಳ್ಳಬೇಕು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News