ಬೆಂಗಳೂರು | ಕಾರ್ಯಕ್ರಮ ಮುಗಿಸಿಕೊಂಡು ಬರುವಾಗ ರಸ್ತೆ ಅಪಘಾತ; ಇಬ್ಬರು ನೃತ್ಯ ಕಲಾವಿದರು ಮೃತ್ಯು
ಪ್ರಜ್ವಲ್ ಹಾಗೂ ಸಹನಾ
ಬೆಂಗಳೂರು: ನೃತ್ಯ ಕಾರ್ಯಕ್ರಮವನ್ನು ಮುಗಿಸಿಕೊಂಡು ಬರುವ ವೇಳೆ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ನೃತ್ಯ ಕಲಾವಿದರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ಸೋಮವಾರ ನಡೆದಿದೆ.
ಬೆಂಗಳೂರಿನ ಶ್ರೀರಾಮಪುರದ ಪ್ರಜ್ವಲ್(22) ಹಾಗೂ ಸಹನಾ(21) ಮೃತಪಟ್ಟ ನೃತ್ಯ ಕಲಾವಿದರು ಎಂದು ಗುರುತಿಸಲಾಗಿದೆ. ಇವರು ಕೆಲ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದರು. ಹಲವು ನೃತ್ಯ ಕಾರ್ಯಕ್ರಮಗಳಲ್ಲಿಯೂ ಜೋಡಿಯಾಗಿ ಪ್ರದರ್ಶನ ನೀಡಿದ್ದರು.
ತುಮಕೂರಿನ ಕುಣಿಗಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಬ್ಬರೂ, ವೇತನ ಪಡೆದುಕೊಂಡು ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನತ್ತ ಬರುತ್ತಿದ್ದರು. ಈ ವೇಳೆ ಅತಿವೇಗವಾಗಿ ಬಂದ ಲಾರಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಸಮೇತ ಚಾಲಕನನ್ನು ವಶಕ್ಕೆ ಪಡೆದಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.