ಬೆಂಗಳೂರು : ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಪ್ರತಿಭಟನೆಗಳನ್ನು ಫ್ರೀಡಂಪಾರ್ಕ್‍ಗೆ ಮಾತ್ರ ಸೀಮಿತಗೊಳಿಸಿರುವ 2021ರ ಪೊಲೀಸ್ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ 'ಹೋರಾಟದ ಹಕ್ಕಿಗಾಗಿ ಜನಾಂದೋಲನ’ ಒಕ್ಕೂಟ ಆಗ್ರಹಿಸಿದೆ.

ಶನಿವಾರ ನಗರದ ನಗರದ ಮೌರ್ಯ ವೃತ್ತದಿಂದ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲು ಮುಂದಾದ ನೂರಾರು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದ್ದಾರೆ. ನಾಗರಿಕ ಅಸಹಕಾರ ಚಳವಳಿಯ ಭಾಗವಾಗಿ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಕಾರ್ಮಿಕ, ದಲಿತ, ವಿದ್ಯಾರ್ಥಿ, ಮಹಿಳಾ, ಪರಿಸರ ಹಾಗೂ ಕೊಳಗೇರಿ ನಿವಾಸಿಗಳ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಗಳು ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ವಕೀಲ ಕ್ಲಿಫ್ಟನ್ ಡಿ.'ರೊಝಾರಿಯೋ ಮಾತನಾಡಿ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದತಿ, ಕಾರ್ಮಿಕರ ಖಾಯಂ ನೇಮಕಾತಿ ಹಾಗೂ ನ್ಯಾಯಯುತ ವೇತನಕ್ಕಾಗಿ ಕಾರ್ಮಿಕರು ಬೀದಿಗಿಳಿದು ಹೋರಾಡುವುದು ಅನಿವಾರ್ಯ. ಪ್ರತಿಭಟನೆಯ ಹಕ್ಕನ್ನು ನಿರ್ಬಂ ಧಿಸಿದರೆ ಕಾರ್ಮಿಕರ ಸಮಸ್ಯೆಗಳು ಸರಕಾರದ ಗಮನಕ್ಕೆ ಬರುವುದೇ ಕಷ್ಟವಾಗುತ್ತದೆ ಎಂದರು.

ಮುಸ್ಲಿಮ್ ಮತ್ತು ಕ್ರೈಸ್ತ ಸಂಘಟನೆಗಳ ಪ್ರತಿನಿಧಿಗಳು ಕೋಮು ಹಿಂಸಾಚಾರ, ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಹಾಗೂ ಸಮಾನತೆಯ ಹಕ್ಕಿನ ಉಲ್ಲಂಘನೆಗಳ ವಿರುದ್ಧ ಜನರು ತಮ್ಮ ಧ್ವನಿ ಎತ್ತಬೇಕಿದೆ. ಫ್ರೀಡಂಪಾರ್ಕ್‍ಗೆ ಪ್ರತಿಭಟನೆ ಸೀಮಿತಗೊಳಿಸುವುದರಿಂದ ಜನರ ಧ್ವನಿ ಮತ್ತು ಅಸ್ತಿತ್ವವೇ ಮರೆಮಾಚುವಂತಾಗುತ್ತದೆ ಎಂದು ಕ್ಲಿಫ್ಟನ್ ಬೇಸರ ವ್ಯಕ್ತಪಡಿಸಿದರು.

ವಕೀಲ ವಿನಯ್ ಶ್ರೀನಿವಾಸ್ ಮಾತನಾಡಿ, ಬೀದಿ ವ್ಯಾಪಾರಿಗಳ ಮೇಲೆ ನಡೆಯುವ ದಿಢೀರ್ ಹಾಗೂ ಕಾನೂನುಬಾಹಿರ ತೆರವು ಕಾರ್ಯಾಚರಣೆಗಳು ಅವರ ಘನತೆಯ ಬದುಕಿನ ಹಕ್ಕಿಗೆ ಧಕ್ಕೆ ತರುತ್ತವೆ. ಇಂತಹ ಅನ್ಯಾಯಗಳ ವಿರುದ್ಧ ಸಂಬಂಧಪಟ್ಟ ಪಾಲಿಕೆ ಕಚೇರಿ ಅಥವಾ ಸಂಚಾರ ಪೊಲೀಸ್ ಠಾಣೆಯ ಎದುರೇ ಪ್ರತಿಭಟನೆ ನಡೆಸಲು ಅವಕಾಶ ಇರಬೇಕು ಎಂದು ಒತ್ತಾಯಿಸಿದರು.

ದೇಶದ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳನ್ನು ನಿಗದಿತ ಸ್ಥಳಗಳಿಗೆ ಸೀಮಿತಗೊಳಿಸುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ದೇಶಾದ್ಯಂತ ಜನರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಅನ್ಯಾಯ ಎಲ್ಲಿ ನಡೆಯುತ್ತದೆಯೋ ಅಲ್ಲಿಯೇ ಪ್ರತಿಭಟನೆ ನಡೆಸುವ ನಾಗರಿಕ ಅಸಹಕಾರ ಚಳವಳಿ ಮುಂದುವರಿಯಲಿದೆ ಎಂದು ವಿನಯ್ ಶ್ರೀನಿವಾಸ್ ತಿಳಿಸಿದರು.

ಸ್ಲಂ ಜನರ ಸಂಘಟನೆಯ ಪ್ರತಿನಿಧಿ ಐಸಾಕ್ ಅಮೃತರಾಜ್ ಮಾತನಾಡಿ, ಕೊಳಗೇರಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಬೋರ್‍ವೆಲ್ ದುರಸ್ತಿ ಹಾಗೂ ಯಾವುದೇ ಮುನ್ಸೂಚನೆ ನೀಡದೆ ನಡೆಯುವ ಅಕ್ರಮ ತೆರವು ಕಾರ್ಯಾಚರಣೆಗಳ ವಿರುದ್ಧ ಹೋರಾಡಲು ನಿವಾಸಿಗಳು ಸಮಸ್ಯೆ ಎದುರಾದ ಸ್ಥಳದಲ್ಲಿಯೇ ಪ್ರತಿಭಟಿಸಬೇಕಾಗುತ್ತದೆ. ಇಂತಹ ಪ್ರತಿಭಟನೆಗಳನ್ನು ಫ್ರೀಡಂಪಾರ್ಕ್‍ಗೆ ಸೀಮಿತಗೊಳಿಸುವುದು ಅರ್ಥಹೀನ ಎಂದು ಹೇಳಿದರು.

ಮಹಿಳಾ ಹೋರಾಟಗಾರ್ತಿ ಗೌರಮ್ಮ ಮಾತನಾಡಿ, ಪ್ರತಿಭಟನೆ ನಡೆಸುವ ಹಕ್ಕು ಪ್ರಜಾಪ್ರಭುತ್ವದ ಜೀವಾಳವಾಗಿದ್ದು, ಅನ್ಯಾಯ ನಡೆದ ಸ್ಥಳದಲ್ಲಿಯೇ ಜನರು ತಮ್ಮ ಧ್ವನಿ ಎತ್ತಲು ಅವಕಾಶ ಕಲ್ಪಿಸಬೇಕು. ಮಹಿಳೆಯರ ಮೇಲಿನ ಲಿಂಗಾಧಾರಿತ ಹಿಂಸಾಚಾರವನ್ನು ತಡೆಯಲು ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸಲು ನಿರಂತರ ಹೋರಾಟ ಅಗತ್ಯವಿದೆ. ಕ್ಷೇತ್ರ ಮರುವಿಂಗಡಣೆ ಮಸೂದೆಯು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಅಪಾಯವನ್ನುಂಟುಮಾಡುವ ಸಾಧ್ಯತೆಯಿದ್ದು, ಅದರ ವಿರುದ್ಧ ಬಿಜೆಪಿ ಕಚೇರಿ ಸೇರಿದಂತೆ ನಗರದ ವಿವಿಧೆಡೆ ಪ್ರತಿಭಟನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ಹೋರಾಟಗಾರರಾದ ಮಮತಾ ಯಜಮಾನ್, ಮೈತ್ರೇಯಿ ಕೃಷ್ಣನ್, ಮಾವಳ್ಳಿ ಶಂಕರ್, ಗಂಗಭೈರಯ್ಯ ಅನಿರುದ್ಧ್, ದೀಪಕ್ ಮುಹಮ್ಮದ್ ಪೀರ್, ವಿಶ್ವಾಸ್, ಕನ್ನಡ ಕುಮಾರ್, ಹೇಮಂತ್ ಕುಮಾರ್, ನರಸಿಂಹಮೂರ್ತಿ, ಸಂಪ್ರೀತಾ, ರೆವರೆಂಡ್ ಇಮ್ಯಾನುಯೆಲ್ ನೆಹೆಮಿಯಾ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮನೋಜ್ ಆಜಾದ್/ವಾರ್ತಾಭಾರತಿ

ಬೆಂಗಳೂರು ವರದಿಗಾರರು