ಬಿಜೆಪಿ ಏನೇ ಮಾಡಿದರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ : ಡಿ.ಕೆ.ಶಿವಕುಮಾರ್
ಬೆಂಗಳೂರು : ಬಿಜೆಪಿಯವರು ಏನೇ ಮಾಡಿದರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಾಲ್ತುಳಿತದ ವಿಚಾರವಾಗಿ ಬಿಜೆಪಿ ಹೋರಾಟ ಮಾಡುತ್ತಿರುವ ಬಗ್ಗೆ ಮಂಗಳವಾರ ವಿಧಾನಸೌಧದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಲ್ತುಳಿತ ಪ್ರಕರಣದಲ್ಲಿ ನಮ್ಮನ್ನು ಟೀಕೆ ಮಾಡುತ್ತಿರುವ ಬಿಜೆಪಿಯವರನ್ನೂ ಹೊರೋಣ. ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡೋಣ ಎಂದು ವ್ಯಂಗ್ಯವಾಡಿದರು.
ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಅನೇಕ ರೈಲ್ವೇ ನಿಲ್ದಾಣಗಳಲ್ಲಿ ಕಾಲ್ತುಳಿತ, ಉತ್ತರ ಪ್ರದೇಶದ ದೇವಸ್ಥಾನವೊಂದರಲ್ಲಿ ನೂರಾರು ಜನ ಕಾಲ್ತುಳಿತಕ್ಕೆ ಒಳಗಾಗಿ ಸತ್ತರು. ಇದಕ್ಕೆಲ್ಲಾ ಯಾರು ಹೊಣೆ?, ಎರಡು ದಿನದ ಹಿಂದೆ ನಾನು ಅಹಮದಾಬಾದ್‍ಗೆ ಹೋಗಿದ್ದೆ. ನಾನೇನಾದರು ಆ ಘಟನೆ ಬಗ್ಗೆ ಕೇಂದ್ರ ಸರಕಾರವನ್ನು ಗುರಿ ಮಾಡಿ ಮಾತನಾಡಿದ್ದೇನೆಯೇ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಕಾಲ್ತುಳಿತ ಪ್ರಕರಣದಲ್ಲಿ ಯಾರ್ಯಾರಿಗೆ ಶಿಕ್ಷೆ ಕೊಡಬೇಕೋ ಆ ಕೆಲಸವನ್ನು ಸರಕಾರ ಮಾಡಿದೆ. ತನಿಖೆಗಾಗಿ ಏಕ ಸದಸ್ಯ ಆಯೋಗವನ್ನು ಸಹ ನೇಮಕ ಮಾಡಲಾಗಿದೆ. ಇಡೀ ದೇಶದಲ್ಲಿ ನೂರಾರು ಘಟನೆಗಳು ನಡೆದಿವೆ. ಆದರೂ ಕಾಂಗ್ರೆಸ್ ಪಕ್ಷ ಎಂದಿಗೂ ಹೆಣದ ಮೇಲೆ ರಾಜಕೀಯ ಮಾಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಬಿಜೆಪಿಯವರ ರಾಜಕೀಯ ತಳಹದಿ ಹಾಳಾಗಿರುವ ಕಾರಣಕ್ಕೆ ಈ ರೀತಿಯ ಆಪಾದನೆಗಳನ್ನು ಮಾಡುತ್ತಿದ್ದಾರೆ. ತಮ್ಮ ಅಸ್ತಿತ್ವ ಇನ್ನೂ ಇದೇ ಎಂದು ತೋರಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ. ಜನ ಸಾಮಾನ್ಯರು ಅವರ ಜೊತೆಯಿಲ್ಲ ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.
ಯಾರು ಹೆಚ್ಚು ಬಲವುಳ್ಳವರೋ ಅವರಿಗೆ ಶತ್ರುಗಳು ಜಾಸ್ತಿ. ಕಡಿಮೆ ಬಲ ಇದ್ದರೆ ಕಡಿಮೆ ಶತ್ರುಗಳು, ಬಲವೇ ಇಲ್ಲದಿದ್ದರೇ ಶತ್ರುಗಳೇ ಇಲ್ಲ. ಬಿಜೆಪಿಯವರಿಗೆ ನಮ್ಮನ್ನು ಕಂಡರೆ ಭಯ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.