×
Ad

ನೀರಿನ ಅಕ್ರಮ ಸಂಪರ್ಕಕ್ಕೆ ರೋಬೋಟಿಕ್ ತಂತ್ರಜ್ಞಾನದ ಮೂಲಕ ತಡೆ : ಡಿ.ಕೆ.ಶಿವಕುಮಾರ್

Update: 2025-11-19 23:39 IST

ಬೆಂಗಳೂರು, ನ.19: ಬೆಂಗಳೂರಿನಲ್ಲಿ ಅಕ್ರಮ ನೀರು ಸೋರಿಕೆಗೆ ಕಡಿವಾಣ ಹಾಕಲು ಮತ್ತು ಕಲುಷಿತ ನೀರು ಪತ್ತೆ ಹಚ್ಚಿ ಶುದ್ಧ ನೀರು ನೀಡುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿಯು ರೋಬೋಟಿಕ್ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಇದು ದೇಶಕ್ಕೆ ಮಾದರಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬುಧವಾರ ಇಲ್ಲಿನ ಅಲಿ ಆಸ್ಕರ್ ರಸ್ತೆಯಲ್ಲಿರುವ ಬೆಂಗಳೂರು ಜಲಮಂಡಳಿ ಆವರಣದಲ್ಲಿ ಬಿಡಬ್ಲ್ಯೂಎಸ್‍ಎಸ್‍ಬಿ ವತಿಯಿಂದ ಅಕ್ರಮ ಸಂಪರ್ಕ ಪತ್ತೆ ಮತ್ತು ನೀರಿನ ಸೋರಿಕೆ ತಡೆಗೆ ನೂತನವಾಗಿ ರಚಿಸಿರುವ ‘ನೀಲಿ ಪಡೆ ಮತ್ತು ರೊಬ್ಯಾಟಿಕ್ ತಂತ್ರಜ್ಞಾನ ಅಳವಡಿಕೆ ಯೋಜನೆ’ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಕ್ರಮವಾಗಿ ನೀರಿನ ಸಂಪರ್ಕ ಪಡೆದಿರುವ ಎಲ್ಲರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಬಡವ, ಶ್ರೀಮಂತ, ಉದ್ಯಮಿ ಯಾರೇ ಇರಲಿ, ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದು ಎಲ್ಲರಿಗೂ ತಿಳಿಯಬೇಕು. ಮಂಡಳಿ ನೀರಿನ ಜತೆಗೆ ಕೊಳಚೆ ನೀರು ಸೇರುವುದು ಪತ್ತೆ ಹಚ್ಚಿ ಅದನ್ನು ಕ್ಷಿಪ್ರವಾಗಿ ಸರಿಪಡಿಸಬೇಕು. ನಗರದ ಜನರು ನೀರಿನ ಕ್ಯಾನ್‍ಗಳ ಮೇಲೆ ಅವಲಂಬಿತರಾಗುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

ಬೆಂಗಳೂರು ಜಲಮಂಡಳಿಯ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಜನರಿಗೆ ಪರಿಶುದ್ಧ ನೀರು ಕೊಡಬೇಕು ಎಂಬುದು ಮಂಡಳಿಯ ಧ್ಯೇಯ ಅದಕ್ಕಾಗಿ ಈ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ನೀರು ಕಲುಷಿತಗೊಂಡ ತಕ್ಷಣ ನಾವು ಪರಿಶೀಲಿಸಲು ಹತ್ತಾರು ಕಡೆ ರಸ್ತೆ ಅಗೆಯಬೇಕಿತ್ತು. ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ. ನೂತನ ರೋಬೋಟಿಕ್ ತಂತ್ರಜ್ಞಾನದ ಮೂಲಕ ಸ್ಕ್ಯಾನ್ ಮಾಡಿ ಕೇವಲ ರಿಪೇರಿ ಅವಶ್ಯಕತೆ ಇದ್ದ ಕಡೆ ಮಾತ್ರ ರಸ್ತೆ ಅಗೆಯಲಾಗುತ್ತದೆ. ಅಲ್ಲದೆ ಕೇವಲ 24 ಗಂಟೆಗಳ ಅವಧಿಯೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ನಮ್ಮ ನೀಲಿ ಪಡೆ 16 ವಿಭಾಗದಲ್ಲೂ ಒಂದೊಂದು ಪಡೆ ಕಾರ್ಯ ನಿರ್ವಹಿಸಲಿದೆ. ಒಂದು ತಂಡದಲ್ಲಿ ಮೂರು ಸಿಬ್ಬಂದಿ ಇರಲಿದ್ದಾರೆ. ಈ ವಿಶೇಷ ದಳವು ಈ ವಾರದಿಂದಲೇ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಇವರು ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿರುವುದನ್ನು ಪತ್ತೆ ಮಾಡಲಿದ್ದಾರೆ. ಕೆಲವು ಪ್ರಕರಣಗಳಿಗೆ ದಂಡ ಹಾಕಲಾಗುತ್ತದೆ. ಇನ್ನು ಕೆಲವು ಪ್ರಕರಣಗಳನ್ನು ಸಕ್ರಮಗೊಳಿಸಲು ಕ್ರಮ ವಹಿಸಲಾಗುವುದು ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ರಿಝ್ವಾನ್ ಅರ್ಶದ್, ಮಂಡಳಿಯ ಆಡಳಿತಧಿಕಾರಿ ಮದನ್ ಮೋಹನ್, ಪ್ರಧಾನ ಮುಖ್ಯ ಎಂಜನಿಯರ್ ಬಿ.ಎಸ್. ದಲಾಯತ್ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News