ರಾಜೀನಾಮೆ ಕೊಡುತ್ತೇವೆ ಎನ್ನುವುದು ಸರಿಯಲ್ಲ: ಡಾ.ಎಚ್.ಸಿ.ಮಹದೇಪ್ಪ

Update: 2026-08-05 19:05 IST

ಬೆಂಗಳೂರು : ‘ಪ್ರಜಾಪ್ರಭುತ್ವವೇ ಇಲ್ಲದೇ ಅಧಿಕಾರವೂ ಇಲ್ಲ, ಸರಕಾರವೂ ಇಲ್ಲ, ಯಾವುದೂ ಇಲ್ಲ. ಹೀಗಾಗಿ ಸಾರ್ವಜನಿಕ ಬದುಕಿನ ಉದ್ದೇಶ ಏನಾಗಿರಬೇಕು ಎಂಬುದು ಬಹುಮುಖ್ಯ. ಅಧಿಕಾರ ಕೊಟ್ಟರೆ ಮಾತ್ರ ಪಕ್ಷ ಬೇಕು ಇಲ್ಲದಿದ್ದರೆ ರಾಜೀನಾಮೆ ಕೊಡುತ್ತೇವೆ ಎನ್ನುವುದು ಸರಿಯಲ್ಲ’ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ರಾಜೀನಾಮೆಗೆ ಮುಂದಾಗಿರುವ ಕೆಲ ಶಾಸಕರ ನಡೆಗೆ ಆಕ್ಷೇಪಿಸಿದ್ದಾರೆ.

ಬುಧವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಅಧಿಕಾರ ಇರಲಿ ಬಿಡಲಿ, ಜನಪರತೆ ಸಂವಿಧಾನದ ಆಶಯ ಮತ್ತು ಸಿದ್ಧಾಂತವನ್ನು ಬಿಡಬಾರದು. ಹಾಗೆ ಮಾಡುತ್ತಾ ಹೋದರೆ ಯಾವ ರಾಜಕೀಯ ಪಕ್ಷಕ್ಕೂ ಉಳಿಗಾಲ ಇರುವುದಿಲ್ಲ. ಪಕ್ಷವನ್ನು ಬಲಡಿಸುವುದು, ಜನಪರತೆಗಾಗಿ ಧ್ವನಿ ಮಾಡುವುದು ಎಲ್ಲ ಕಾಲದ ಅಗತ್ಯ. ಆಗ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ’ ಎಂದು ಹೇಳಿದ್ದಾರೆ.

‘ಪ್ರಜಾಪ್ರಭುತ್ವಕ್ಕಾಗಿ ದನಿ ಮಾಡಲು ಅಧಿಕಾರ ಇರಲೇಬೇಕೆಂಬ ನಿಯಮವಿಲ್ಲ. ಅಧಿಕಾರಕ್ಕಿಂತ ದೊಡ್ಡದು ಎಂದರೆ ಅದು ಅಂಬೇಡ್ಕರ್ ಅವರು ರೂಪಿಸಿರುವ ಸಂವಿಧಾನ ಮತ್ತು ಅದರ ನ್ಯಾಯದ ಪ್ರಜ್ಞೆ ಆಗಿದ್ದು ಅದಕ್ಕಾಗಿಯೇ ನನ್ನ ಹೋರಾಟ ಸದಾ ಇರಲಿದೆ. ಸಾರ್ವಜನಿಕ ಜೀವನದಲ್ಲಿ ಎಲ್ಲರಿಗಿಂತಲೂ ಹೆಚ್ಚಿನ ಕೆಲಸ ಮಾಡಿರುವ ಹೆಮ್ಮೆ ನನಗಿದೆ. ಕೆಲಸವನ್ನು ಮಾಡಲು ಕೆಲವೊಮ್ಮೆ ಅವಕಾಶ ಸಿಗುತ್ತದೆ, ಕೆಲವೊಮ್ಮೆ ಸಿಗುವುದಿಲ್ಲ. ಆದರೆ, ಸಂವಿಧಾನಾತ್ಮಕ ಸಿದ್ಧಾಂತ ಮತ್ತು ಪ್ರಜಾಪ್ರಭುತ್ವದ ಆಶಯ ಕಾಪಾಡುವುದು ನಮ್ಮ ಆದ್ಯತೆ ಆಗದೇ ಹೋದರೆ, ಬಂಡವಾಳಶಾಹಿಗಳು, ಸರ್ವಾಧಿಕಾರಿಗಳು ದೇಶದ ಸಂವಿಧಾನವನ್ನು ಹಾಳು ಮಾಡುವ ಅಪಾಯ ಹೆಚ್ಚು’ ಎಂದು ಅವರು ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News