ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಡಾ.ಎಚ್.ಸಿ.ಮಹದೇವಪ್ಪ
ಮೈಸೂರು : ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ ನಾಲ್ಕು ತಿಂಗಳ ನಂತರ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಕುವೆಂಪುನಗರದಲ್ಲಿರುವ ಸಿದ್ದರಾಮಯ್ಯ ಅವರ ನಿವಾಸಕ್ಕೆ ಬುಧವಾರ ರಾತ್ರಿ ಆಗಮಿಸಿದ ಡಾ.ಎಚ್.ಸಿ.ಮಹದೇವಪ್ಪ, ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ನಾನು ಭೇಟಿ ಮಾಡುವುದು ಹೊಸದೇನಲ್ಲ, ನಮ್ಮದು 40 ವರ್ಷಗಳ ಸ್ನೇಹ, ಸಿದ್ದರಾಮಯ್ಯ, ಮಹದೇವಪ್ಪ ಮಾತನಾಡುತ್ತಿಲ್ಲ ಎಂದು ಜನ ಮಾತನಾಡುತ್ತಿದ್ದಾರೆ. ಮಾತನಾಡದೆ ಇರುವುದಕ್ಕೆ ನಾವೇನು ಜಗಳವೇ ಆಡಿಲ್ಲವಲ್ಲ ಎಂದು ಹೇಳಿದರು.
ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಮಾತನಾಡಿಕೊಂಡು ಸಂವಿಧಾನ ದಿನಾಚರಣೆ ಮಾಡಿದ್ದೆವು. ಈಗ ಮೈಸೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸಂವಿಧಾನ ದಿನಾಚರಣೆ ಮಾಡುತ್ತಿದ್ದೇವೆ. ಇದನ್ನು ಯಶಸ್ವಿಗೊಳಿಸಬೇಕು ಎಂಬುದೇ ನಮ್ಮ ಉದ್ದೇಶ ಎಂದರು.
ನಾನು ಅವರ ಜೊತೆ ಮಾತನಾಡುತ್ತಿಲ್ಲ ಎನ್ನುವುದು ತಪ್ಪು, ಅವರು ಮುಖ್ಯಮಂತ್ರಿಯಾಗಿದ್ದಾಗ, ನಾನು ಸಚಿವನಾಗಿದ್ದಾಗ ಒಂದೊಂದು ತಿಂಗಳು ಮಾತನಾಡುತ್ತನೇ ಇರಲಿಲ್ಲ. ಒಂದು ಬಾರಿ ಸ್ನೇಹತನಾದರೆ ಯಾವಗಲೂ ಸ್ನೇಹಿತರೆ ಎಂದು ಹೇಳಿದರು.