705 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ: ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು : ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ರಾಮನಗರ ಮತ್ತು ಉಲ್ಲಾಳಕ್ಕೆ 705 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಬಜೆಟ್ ಮಂಡಿಸುವ ವೇಳೆ ತಿಳಿಸಿದ ಅವರು, ಅಮೃತ್-2.0 ಯೋಜನೆಯಡಿಯಲ್ಲಿ 233 ಕುಡಿಯುವ ನೀರು ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ. ಇದರೊಂದಿಗೆ, 142 ಕೋಟಿ ರೂ. ವೆಚ್ಚದಲ್ಲಿ ಶಿಕಾರಿಪುರ, ಸಾಗರ, ಐನಾಪುರ, ಎಮ್.ಕೆ. ಹುಬ್ಬಳ್ಳಿ, ಕುಡಚಿ, ಬೈಲಹೊಂಗಲ, ಶಹಾಪುರ ಹಾಗೂ ಶ್ರೀರಂಗಪಟ್ಟಣಕ್ಕೆ ಒಳಚರಂಡಿ ಯೋಜನೆಯನ್ನು ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಮಹಾತ್ಮಾ ಗಾಂಧಿ ನಗರ ವಿಕಾಸ್ 2.0 ಯೋಜನೆಗೆ 2 ಸಾವಿರ ಕೋಟಿ ರೂ. ಅನುದಾನವನ್ನು ಘೋಷಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ, ಯುಐಡಿಎಫ್ ಅಡಿಯಲ್ಲಿ 600 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಯಚೂರು, ಬೀದರ್ ಹಾಗೂ ಹಾಸನ ನಗರಸಭೆಗಳನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಧಾರವಾಡ ಮಹಾನಗರ ಪಾಲಿಕೆಯನ್ನು ಹೊಸದಾಗಿ ರಚಿಸಲಾಗಿದೆ. ನಗರೋತ್ಥಾನ 4ನೇ ಹಂತದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 2025-26ನೇ ಸಾಲಿನಲ್ಲಿ 500 ಕೋಟಿ ರೂ. ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಂದ ನೀಡುತ್ತಿರುವ ನಾಗರಿಕ ಸೇವೆಗಳ ಪಾವತಿ ಹಾಗೂ ತೆರಿಗೆಗಳನ್ನು ತಂತ್ರಜ್ಞಾನ ಆಧರಿಸಿ ಆನ್‍ಲೈನ್ ಪಾವತಿ ಕಾರ್ಯವಿಧಾನದ ಮೂಲಕ ಸಂಗ್ರಹಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು, ಜಿಲ್ಲಾ ನಗರಾಭಿವೃದ್ಧಿ ಕೋಶಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಡಳಿತ ಕೇಂದ್ರ ಇಲಾಖೆಯ ಸಹಯೋಗದೊಂದಿಗೆ ಕಛೇರಿಯ ಸುಗಮ ಆಡಳಿತಕ್ಕೆ ಇ-ಆಫೀಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ವಿನ್ಯಾಸ ಮತ್ತು ಕಟ್ಟಡ ನಕ್ಷೆಗಳಿಗೆ ಆನ್‍ಲೈನ್ ಮೂಲಕ ಅನುಮೋದನೆ ನೀಡಲು ‘ಯೂನಿಫೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್’ ತಂತ್ರಾಂಶ ಅಳವಡಿಸಿಕೊಳ್ಳಲಾಗುತ್ತಿದ್ದು, ಹಾರ್ಡ್‍ವೇರ್ ಸಾಮಥ್ರ್ಯವನ್ನು ಉನ್ನತೀಕರಿಸಲಾಗುವುದು. ನಗರ ಯೋಜಕರ ಕಾರ್ಯಕ್ಷಮತೆ ಹೆಚ್ಚಿಸಲು ಜಿಐಎಸ್ ತರಬೇತಿಗೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.