ಉತ್ತಮ ಶಿಕ್ಷಣದ ನಂಬಿಕೆಯೊಂದೇ ಮಗುವಿನ ಶಾಲೆ ಬದಲಾವಣೆಗೆ ಆಧಾರವಾಗದು: ಹೈಕೋರ್ಟ್
ಬೆಂಗಳೂರು : ಬೇರೊಂದು ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಪೋಷಕರ ನಂಬಿಕೆಯೊಂದೇ ಮಗುವಿನ ಶಾಲೆ ಬದಲಿಸಲು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ಶೈಕ್ಷಣಿಕ ಗುಣಮಟ್ಟ, ಬೋಧನಾ ಸೌಲಭ್ಯ ಅಥವಾ ವಾತಾವರಣದಲ್ಲಿ ಕೊರತೆಯಿದೆ ಎಂಬುದನ್ನು ಸಾಬೀತುಪಡಿಸದೆ, ಶಾಲೆ ಬದಲಾವಣೆಗೆ ನ್ಯಾಯಾಲಯದ ಮಧ್ಯಪ್ರವೇಶ ಕೋರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ 9 ವರ್ಷದ ಪುತ್ರನನ್ನು, ಸರ್ಜಾಪುರ ರಸ್ತೆಯ ಶಾಲೆಗೆ ವರ್ಗಾಯಿಸಲು ಅನುಮತಿ ಕೋರಿ ತಂದೆ ನೂರ್ ಅಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದ್ದು, ಮಗುವಿನ ಶಾಲೆ ಬದಲಾವಣೆಗೆ ಅನುಮತಿ ನಿರಾಕರಿಸಿ 2026ರ ಸೆ.15ರಂದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.
ಹೈಕೋರ್ಟ್ ಹೇಳಿದ್ದೇನು?: ಹಾಲಿ ಪ್ರಕರಣದಲ್ಲಿ ಮಗುವಿನ ಪ್ರಸ್ತುತ ಶಾಲೆಯ ಶೈಕ್ಷಣಿಕ ಗುಣಮಟ್ಟ, ಬೋಧನಾ ಸೌಲಭ್ಯ ಅಥವಾ ವಾತಾವರಣದಲ್ಲಿ ಕೊರತೆಯಿದೆ ಎಂಬುದಕ್ಕೆ ದಾಖಲೆಗಳಿಲ್ಲ. ಮಗು ಓದಿನಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ ಅಥವಾ ಅದೇ ಶಾಲೆಯಲ್ಲಿ ಮುಂದುವರಿದರೆ ಭವಿಷ್ಯಕ್ಕೆ ಹಾನಿಯಾಗುತ್ತದೆ ಎಂಬುದಕ್ಕೂ ಪೂರಕ ಅಂಶಗಳಿಲ್ಲ ಎಂದಿರುವ ಹೈಕೋರ್ಟ್, ಮಗುವಿಗೆ ಮತ್ತೊಂದು ಶಾಲೆ ಉತ್ತಮ ಅವಕಾಶ ನೀಡಲಿದೆ ಎಂಬ ಪ್ರಾಮಾಣಿಕ ನಂಬಿಕೆ ತಂದೆಗೆ ಇರಬಹುದು. ಆದರೆ, ಆ ನಂಬಿಕೆಯೊಂದೇ ಶಾಲೆ ಬದಲಾವಣೆಗೆ ಅಥವಾ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಆಧಾರವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.