ಕೆಇಎ: ವಾಯುವ್ಯ ಸಾರಿಗೆ ಸಂಸ್ಥೆಯ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ
ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ (ಎನ್‍ಡಬ್ಯೂಕೆಆರ್‍ಟಿಸಿ) ವಿವಿಧ ವೃಂದಗಳ ದರ್ಜೆ-2 ಅಧಿಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಎ.9ರಂದು ಪರೀಕ್ಷೆಯು ನಡೆಯಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025ರ ನ.19ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಸಹಾಯಕ ಆಡಳಿತಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ಕಾನೂನು ಅಧಿಕಾರಿ, ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ, ಸಹಾಯಕ ತಾಂತ್ರಿಕ ಶಿಲ್ಪಿ ಮತ್ತು ಸಹಾಯಕ ಸಂಚಾರ ವ್ಯವಸ್ಥಾಪಕ ಹುದ್ದೆಗಳಿಗೆ (ಆಂತರಿಕ ನೇಮಕಾತಿ ಮತ್ತು ನೇರ ನೇಮಕಾತಿ) ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಈಗ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಎ.9ರ ಬೆಳಗ್ಗೆ 10.30 ರಿಂದ 12.30ರವರೆಗೆ ಮೊದಲನೆ ಪತ್ರಿಕೆ ನಡೆಯಲಿದೆ. ಅದೇ ದಿನ ಮಧ್ಯಾಹ್ನ 2.30 ರಿಂದ 4.30 ರವರೆಗೆ ಎರಡನೆ ಪತ್ರಿಕೆ ನಡೆಯಲಿದೆ. ಎರಡು ಪತ್ರಿಕೆಗಳು ತಲಾ 100 ಪ್ರಶ್ನೆಗಳನ್ನು ಒಳಗೊಂಡಿದ್ದು, ಎರಡು ಪತ್ರಿಕೆಗಳು ಸೇರಿ ಗರಿಷ್ಟ 600 ಅಂಕಗಳಿರುತ್ತವೆ.
ಪರೀಕ್ಷಾ ಕೇಂದ್ರದಲ್ಲಿ ಮುಖಚಹರೆ ಪರಿಶೀಲಿಸಿ ಪ್ರವೇಶ ನೀಡುವುದರಿಂದ ಎರಡು ಘಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದೊಳಗೆ ಹಾಜರಿರಬೇಕು. ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/4 ರಷ್ಟು (0.75) ಅಂಕಗಳನ್ನು ಕಡಿತಗೊಳಿಸಲಾಗುವುದು.
ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ಆಯ್ಕೆ/ವೃತ್ತವನ್ನು ಶೇಡ್ ಮಾಡಲು ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ ಐದು ನಿಮಿಷಗಳನ್ನು ನೀಡಲಾಗುವುದು. ಯಾವುದೇ ಆಯ್ಕೆಯನ್ನು / ವೃತ್ತವನ್ನು ಶೇಡ್ ಮಾಡಿಲ್ಲದಿದ್ದರೆ, ಪ್ರಶ್ನೆಗೆ 1/4 ರಷ್ಟು (0.75) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.