×
Ad

ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿದರೆ ಸರಿ ಹೋಗುತ್ತದೆ : ಹೈಕೋರ್ಟ್‌

Update: 2025-01-30 12:23 IST

ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ರಾಮನಗರದ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 14 ಎಕರೆ ಸರಕಾರಿ ಜಮೀನು ಒತ್ತುವರಿ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಚಾಟಿ ಬೀಸಿದೆ.

ಭೂ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಹಿಂದೆ ಲೋಕಾಯುಕ್ತ ನೀಡಿರುವ ಆದೇಶ ಜಾರಿಗೊಳಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಸಂಬಂಧಿಗಳು ಉನ್ನತ ಹುದ್ದೆಯಲ್ಲಿ ಇದ್ದಾರೆ ಅಂದುಕೊಂಡು ನೀವು ಐದು ವರ್ಷ ಏನೂ ಮಾಡಿಲ್ಲ ತಾನೆ? ನಿಮಗೆ ಎರಡು ವಾರ ಸಮಯ ಕೊಡುತ್ತೇನೆ ಸೂಕ್ತ ಕ್ರಮವಹಿಸಿ ಎಂದು ಅರ್ಜಿ ವಿಚಾರಣೆ ವೇಳೆ ಹಾಜರಿದ್ದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರಿಗೆ ತಿಳಿಸಿದರು.

ವಿಚಾರಣೆ ವೇಳೆ ಕಂದಾಯ ಇಲಾಖೆಯ ಅಧಿಕಾರಿ ರಾಜೇಂದ್ರ ಕುಮಾರ ಕಠಾರಿಯಾ ಖುದ್ದು ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಲು ಮುಂದಾದರು. ಈ ವೇಳೆ ನ್ಯಾಯಮೂರ್ತಿ ಸೋಮಶೇಖ‌ರ್, ಕೆ.ವಾಸುದೇವನ್, ಟಿ.ಆರ್.ಧನಂಜಯ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ನ್ಯಾಯಾಂಗ ನಿಂದನೆ ಮೊಕದ್ದಮೆಗಳಲ್ಲಿ ಅದೂ ಸಾರ್ವಜನಿಕ ಕಾಳಜಿಯುಳ್ಳ ಪ್ರಕರಣಗಳಲ್ಲಿ ಆಡಳಿತಾಂಗಕ್ಕೆ ಕಿಂಚಿತ್ತೂ ಕರುಣೆ ತೋರಬಾರದು ಎಂದಿದೆ. ಇದನ್ನೇ ನಾನೂ ಅನುಸರಿಸಬೇಕಾಗುತ್ತದೆ ಎಂದು ತಿಳಿಸಿದರು.

ವಾದ ಆಲಿಕೆಯ ನಡುವೆ ಹೆಚ್ಚುವರಿ ಅಡ್ವಕೇಟ್ ಜನರಲ್ ಕಿರಣ್ ವಿ.ರೋಣ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶದ ಅನುಪಾಲನೆಗೆ ಮೂರು ತಿಂಗಳಾದರೂ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಆದರೆ, ನ್ಯಾಯಮೂರ್ತಿ ಸೋಮಶೇಖರ್ ಎರಡು ವಾರದೊಳಗೆ ಆದೇಶ ಪಾಲಿಸಿ ಎಂದು ತಿಳಿಸಿದರು.

ಅರ್ಜಿದಾರ ಎಸ್.ಆರ್.ಹಿರೇಮಠ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಎಸ್.ಬಸವರಾಜ್, ಕೇತಗಾನಹಳ್ಳಿ ವ್ಯಾಪ್ತಿಯ 14 ಎಕರೆ ಸರಕಾರಿ ಜಮೀನನ್ನು ಎಚ್.ಡಿ.ಕುಮಾರಸ್ವಾಮಿ ಮತ್ತಿತರರು ಒತ್ತುವರಿ ಮಾಡಿರುವುದನ್ನು ತಹಶೀಲ್ದಾರ್ ಮತ್ತು ಸಂಬಂಧಿಸಿದ ಕಂದಾಯ ಅಧಿಕಾರಿಗಳು ಗುರುತಿಸಿದ್ದಾರೆ. ಅಂತೆಯೇ, ಲೋಕಾಯುಕ್ತ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸಲು ಸರಕಾರ ಮುಂದಾಗಿಲ್ಲ ಎಂದು ಪುನರುಚ್ಚರಿಸಿದರು. ವಿಚಾರಣೆಯನ್ನು ಫೆ.21ಕ್ಕೆ ಮುಂದೂಡಲಾಗಿದೆ 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News