×
Ad

2022ರ ಮೀಸಲಾತಿ ಕಾಯ್ದೆಯನ್ನು ಶೆಡ್ಯೂಲ್ 9ಕ್ಕೆ ಸೇರಿಸಲು ವಿ.ಎಸ್.ಉಗ್ರಪ್ಪ ಆಗ್ರಹ

Update: 2026-01-26 00:27 IST

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ ಮಾಡಿರುವ 2022ರ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸಿ ಎಂದು ‘ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ’ಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2022ರ ಮೀಸಲಾತಿ ಕಾಯ್ದೆಯನ್ನು ಭಾರತದ ಸಂವಿಧಾನದ 9 ನೇ ಶೆಡ್ಯೂಲ್‍ಗೆ ಸೇರಿಸಲು ಮತ್ತು ಅನುಚ್ಛೇದ 15 ಮತ್ತು 16ಕ್ಕೆ ಮೀಸಲಾತಿ ಹೆಚ್ಚಿಸಲು ತಿದ್ದುಪಡಿ ತರಲು ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಬಂದಾಗೆಲ್ಲ ಕೆಲ ಜಾತಿಗಳನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿ ಜನರನ್ನು ದಿಕ್ಕು ತಪ್ಪಿಸಿದರು. ಇದರಿಂದ ಸಾಕಷ್ಟು ಜನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದ್ದಕ್ಕೆ ಬಿಜೆಪಿ ಸರಕಾರ ಹಾಗೂ ಬಿಜೆಪಿ ನಾಯಕರೇ ಕಾರಣ ಎಂದರು.

ಮುಂದಿನ ಬಾರಿ ಸುಮಾರು 4 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಆದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಹಣವನ್ನು ಬೇರೆ ಕಾರ್ಯಗಳಿಗೆ ಬಳಸಬಾರದು ಎಂಬ ಕಾನೂನು ಇದ್ದರೂ ಬಳಕೆಯಾಗುತ್ತಿದೆ. ಇದನ್ನು ತಪ್ಪಿಸಬೇಕು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಎಚ್.ಡಿ. ಕುಮಾರಸ್ವಾಮಿ, ಹಾಗೂ ಆಗ ಮುಖ್ಯಮಂತ್ರಿ ಆಗಿದ್ದ ಬಸವರಾಜ್ ಬೊಮ್ಮಾಯಿ ಮತ್ತಿತರರು ಕೇಂದ್ರದ ಮೇಲೆ ಒತ್ಗಡ ತಂದು ಕರ್ನಾಟಕದ ತಳ ಸಮುದಾಯಗಳ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಸಂವಿಧಾನದಲ್ಲಿ ಎಲ್ಲೂ ಆರ್ಥಿಕ ಮೀಸಲಾತಿಯ ಬಗ್ಗೆ ಡಾ.ಅಂಬೇಡ್ಕರ್ ಉಲ್ಲೇಖಿಸಿಲ್ಲ. ಆದರೆ ಇಷ್ಟು ವರ್ಷಗಳಾದರೂ ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದವರ ಹೆಸರಿನಲ್ಲಿ ಮೇಲ್ವರ್ಗದವರಿಗೆ ಮೀಸಲಾತಿ ಘೋಷಣೆ ಮಾಡಿದೆ. ಆರ್ಥಿಕವಾಗಿ ಹಿಂದುಳಿದವರ ಮೇಲ್ವರ್ಗದ ಸಮುದಾಯದ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು 8.5 ಲಕ್ಷ ರೂ. ಆದಾಯ ಮಿತಿ ಇದೆ. ಆದರೆ ತಲ ತಲಾಂತರದಿಂದ ಶೋಷಣೆ ಅನುಭವಿಸುತ್ತ ಬಂದಿರುವ ಎಸ್ಸಿ, ಎಸ್ಟಿ ಸಮುದಾಯದ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಆದಾಯ ಮಿತಿ 2.5ಲಕ್ಷ ರೂ.ನಿಗಧಿಪಡಿಸಲಾಗಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಹಿಂದೆ ಬಿಜೆಪಿ ಸರಕಾರ ಇದ್ದಾಗಲೇ ಹೋರಾಟ ನಡೆಸಿದ ಫಲವಾಗಿ ಪರಿಶಿಷ್ಟ ಪಂಗಡಕ್ಕೆ ಶೇ.3ರ ಬದಲು ಶೇ.7ರಷ್ಟು ಮೀಸಲಾತಿ ಹಾಗೂ ಪರಿಶಿಷ್ಟ ಜಾತಿಗೆ ಶೇ.15, ಇತರೆ ಹಿಂದುಳಿದ ವರ್ಗಗಳಿಗೆ ಶೇ.32 ಮೀಸಲಾತಿ ಜಾರಿಗೊಳಿಸಲಾಗಿತ್ತು. ಆದರೆ ಅದನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಇದರಿಂದಾಗಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆ ಕಾಯ್ದೆಯನ್ನು ಅನೂರ್ಜಿತಗೊಳಿಸಿದೆ. ಕರ್ನಾಟಕ ಹೈಕೋರ್ಟ್ ಕೂಡ ಈ ಕಾಯ್ದೆಗೆ ತಡೆಯಾಜ್ಞೆ ನೀಡಿದೆ. ಇದರ ಪರಿಣಾಮ ಬಿಜೆಪಿ ಸರಕಾರ ಜಾರಿಗೆ ತಂದ ಮೀಸಲಾತಿ ಹೆಚ್ಚಳ ರದ್ದಾಗಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆ 2022ನ್ನು ಶೆಡ್ಯೂಲ್ 9ಕ್ಕೆ ಸೇರಿಸಲು ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಒಂದು ತಿಂಗಳಾದರೂ ಕೇಂದ್ರ ಸರಕಾರ ಅದನ್ನು ಶೆಡ್ಯೂಲ್ 9ಕ್ಕೆ ಸೇರಿಸದಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದ ತಳ ಸಮುದಾಯದ ಬಡ ಜನರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಈಗಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರು ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳಿಗೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಕಾರ್ಯಾಧ್ಯಕ್ಷ ಎಂ.ನರಸಿಂಹಯ್ಯ, ಖಜಾಂಚಿ ಈ.ರಾಜಪ್ಪ, ಉಪಾಧ್ಯಕ್ಷ ರಾಜಣ್ಣ ಟಿ.ಚಿತ್ರದುರ್ಗ, ರೇವತಿ ಭೀಮಪುತ್ರಿ, ಪ್ರಧಾನ ಕಾರ್ಯದರ್ಶಿಗಳಾದ ಸಣ್ಣ ನಾಯಕ್, ರಮೇಶ್ ಹಿರೇಜಂಬೂರು, ನಾಗರಾಜ ಗಾಣದ ಹುಣಸೆ, ನಿವೃತ್ತ ಅಧಿಕಾರಿ ಕೆಂಪರಾಮಯ್ಯ, ಕೆಪಿಸಿಸಿ ಎಸ್‍ಟಿ ಸೆಲ್ ಅಧ್ಯಕ್ಷ ವಿಜಯ ನಾಯಕ್, ವಾಲ್ಮೀಕಿ ನಾಯಕ ಮಹಾಸಭಾ ಮಹಿಳಾ ಅಧ್ಯಕ್ಷೆ ಜಯಶ್ರೀ ಗುಡ್ಡೆಕಾಯಿ, ಗುಲ್ಬರ್ಗಾ ವಿವಿ ನಿವೃತ್ತ ಉಪಕುಲಪತಿ ಶ್ರೀರಾಮುಲು, ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಸವರಾಜ್ ನಾಯಕ್, ಕಾರ್ಯದರ್ಶಿ ತುಳಸಿರಾಮ್ ಟಿ.ಆರ್., ಸಂಘಟನಾ ಕಾರ್ಯದರ್ಶಿ ಕೆ.ವಿ.ನಾಗೇಂದ್ರ, ರವಿಚಂದ್ರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News