ಕೇಂದ್ರದ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುತ್ತಿವೆ : ನ್ಯಾ.ಗೋಪಾಲಗೌಡ
‘ಕಾರ್ಮಿಕರ ಸಮಾವೇಶ
ಬೆಂಗಳೂರು : ಕಾರ್ಮಿಕ ಕಾನೂನುಗಳು ಬಂಡವಾಳ ಮತ್ತು ಶ್ರಮಶಕ್ತಿ ನಡುವೆ ಸಮಾನತೆಯನ್ನು ತರುವ ಪ್ರಯತ್ನ ಮಾಡಿತ್ತು. ಆದರೆ ಕೇಂದ್ರ ಸರಕಾರ ಈ ಕಾನೂನುಗಳನ್ನು ತೆಗೆದು, ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿದ್ದು, ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ಹೇಳಿದ್ದಾರೆ.
ರವಿವಾರ ಗಾಂಧಿಭವನದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ವತಿಯಿಂದ ಆಯೋಜಿಸಿದ್ದ ‘ಕಾರ್ಮಿಕರ ಸಮಾವೇಶ’ದಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ ಕನಿಷ್ಠ ವೇತನ, ಕೆಲಸದ ಭದ್ರತೆಯನ್ನು ಒದಗಿಸದೇ, ಈಗ ಕಾರ್ಮಿಕರನ್ನು ಕಾಲಾಳುಗಳಾಗಿ ಪರಿವರ್ತಿಸಲು ಈ ಕಾರ್ಮಿಕ ಸಂಹಿತೆಗಳನ್ನು ಜಾರಿಮಾಡಲಾಗಿದೆ ಎಂದರು.
ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಬೇಕೆಂದರೆ, ದಿಲ್ಲಿಯ ಗಡಿಭಾಗದಲ್ಲಿ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ್ದ ಹೋರಾಟದಂತೆ ಕಾರ್ಮಿಕ ವರ್ಗದವರೂ, ಹೋರಾಟವನ್ನು ಹಮ್ಮಿಕೊಳ್ಳಲು ಸಿದ್ಧರಾಗಬೇಕು. ಈ ಹಿಂದಿನ ಕಾಯ್ದೆಗಳು ಕೈಗಾರಿಕಾ ವಿವಾದಗಳನ್ನು ಹೇಗೆ ಪರಿಹರಿಸಬೇಕು ಎಂಬ ವಿಷಯಗಳ ಕುರಿತು ಹೇಳಿಕೊಟ್ಟಿತ್ತು. ಆದರೆ ಈಗ ಬಂದಿರುವ ಕಾರ್ಮಿಕ ಸಂಹಿತೆಗಳು ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಎಐಸಿಸಿಟಿಯು ರಾಷ್ಟ್ರಾಧ್ಯಕ್ಷ ವಿ.ಶಂಕರ್ ಮಾತನಾಡಿ, ಈಗ ನಿರುದ್ಯೋಗವು ಹೆಚ್ಚುತ್ತಿದ್ದು, ಗಿಗ್ ಕಾರ್ಮಿಕರು ಅನುಭವಿಸುತ್ತಿರುವ ಕೆಲಸದ ಮತ್ತು ವೇತನ ಅಭದ್ರತೆಯಿಂದ ಬೀದಿಪಾಲಾಗುತ್ತಿದ್ದಾರೆ. ದೇಶದಲ್ಲಿ ಕಾರ್ಮಿಕ ವಿರೋಧಿ ಸಂಹಿತೆಗಳು ಜಾರಿಯಾಗಿದೆ. ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ, ಫೆ.12ರ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಮುಷ್ಕರವನ್ನು ಯಶಸ್ವಿಗೊಳಿಸಿ, ಮೋದಿ ಸರಕಾರಕ್ಕೆ ತಕ್ಕ ಪಾಠವನ್ನು ದುಡಿಯುವ ವರ್ಗದವರೇ ಕಲಿಸಬೇಕು ಎಂದರು.
ಎಐಸಿಸಿಟಿಯುನ ರಾಷ್ಟ್ರ ಉಪಾಧ್ಯಕ್ಷ ಕ್ಲಿಫ್ಟನ್ ಡಿ ರೊಜಾರಿಯೋ ಮಾತನಾಡಿ, ನಾವು ಕೇಳುತ್ತಿರುವುದು 42 ಸಾವಿರ ರೂ. ವೇತನ. ಆದರೆ, ಕಾರ್ಮಿಕ ಸಂಹಿತೆಗಳಡಿ ಕನಿಷ್ಠ ವೇತನವನ್ನೂ ನೀಡುವುದಿಲ್ಲ ಎಂದು ಮಾತನಾಡಿದರು.
ಎಐಸಿಸಿಟಿಯುನ ರಾಜ್ಯಧ್ಯಕ್ಷ ಪಿ.ಪಿ. ಅಪ್ಪಣ್ಣ ಮಾತನಾಡಿ, ಕೇಂದ್ರ ಸರಕಾರವು ದೇಶವನ್ನು ಅದಾನಿ-ಅಂಬಾನಿಗಳಂತಹ ಬಂಡವಾಳಿಗರಿಗೆ ಮಾರಾಟ ಮಾಡುತ್ತಿದ್ದು, ಕಾರ್ಮಿಕರ ಶ್ರಮ ದೋಚಿ ಅತಿಹೆಚ್ಚು ಲಾಭ ಪಡೆಯಲು ಕಾರ್ಪೊ ರೇಟ್ ಪರ ಕಾರ್ಮಿಕ ಸಂಹಿತೆಗಳನ್ನು ಜಾರಿಮಾಡಿದೆ. ಈ ಕಾರ್ಮಿಕ ಸಂಹಿತೆಗಳು ನಮ್ಮನ್ನು ಹೇಗೆ ಶೋಷಣೆ ಮಾಡುತ್ತದೆ ಎಂದು ತಿಳಿದು, ಅದರ ವಿರುದ್ಧ ಹೋರಾಟ ಮಾಡುವುದು ಅತ್ಯಗತ್ಯವಾಗಿದೆ ಎಂದರು.
ಎಐಸಿಸಿಟಿಯುನ ರಾಜ್ಯ ಕಾರ್ಯದರ್ಶಿ ಮೈತ್ರೇಯಿ ಮಾತನಾಡಿ, ಮೋದಿ ಸರಕಾರವು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿದ್ದಲ್ಲದೆ, ಇದು ಕಾರ್ಮಿಕರ ಹಿತಕ್ಕಾಗಿ ತಂದಿರುವ ಬದಲಾವಣೆಗಳು ಎಂದು ಸುಳ್ಳು ಹೇಳುತ್ತಿದೆ ಎಂದರು.
ಇದೇ ವೇಳೆ ಎಐಸಿಸಿಟಿಯು ಪ್ರಕಟಿಸಿರುವ ‘ಕಾರ್ಮಿಕ ಸಂಹಿತೆಗಳು: ಮೋದಿ ಕಟ್ಟುತ್ತಿರುವ ಸುಳ್ಳುಗಳ ಅನಾವರಣ’ ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕೇಂದ್ರ ಸರಕಾರದ ಸಾರ್ವಜನಿಕ ಉದ್ದಿಮೆಗಳಲ್ಲಿ ಗುತ್ತಿಗೆ ಪದ್ಧತಿಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು, ಗ್ರಂಥಾಲಯ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಸ್ವಚ್ಛತಾ ಕಾರ್ಮಿಕರು, ಗಣಿ ಕಾರ್ಮಿಕರು, ನೀರಾವರಿ ಕಾರ್ಮಿಕರು ಸೇರಿದಂತೆ ಮತ್ತಿತರರು ಭಾಗವಹಿದ್ದರು.
‘ಇತ್ತೀಚೆಗೆ ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಾಧೀಶರು ಕಾರ್ಮಿಕ ಸಂಘಟನೆಗಳ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ. ಶ್ರಮಿಕರಿಗೆ ಹಕ್ಕು, ಘನತೆ, ಸಮಾನತೆ ದೊರಕಲು ಕಾರ್ಮಿಕ ಸಂಘಟನೆಗಳ ಪಾತ್ರವಿದ್ದು, ಸಂಘಟನೆಗಳನ್ನು ಕಡೆಗಣಿಸುವುದು ಸರಿಯಲ್ಲ. ಕಾರ್ಮಿಕರು ತಮ್ಮ ಶ್ರಮದಿಂದ ನಮ್ಮೆಲ್ಲರ ಮನೆ ಮತ್ತು ಸಮಾಜವನ್ನು ನಡೆಸುತ್ತಿದ್ದರೂ, ಅವರ ಶ್ರಮವನ್ನು ಗುರುತಿಸಲು ಸುಪ್ರೀಂ ಕೋರ್ಟ್ ವಿಫಲವಾಗಿದೆ. ಕಾರ್ಮಿಕರಿಂದಲೇ ಇಡೀ ದೇಶ ನಡೆಯುತ್ತದೆ ಎಂದು ತಿಳಿದಿದ್ದರೂ ಸುಪ್ರೀಂ ಕೋರ್ಟ್ ಕಾರ್ಮಿಕರ ಪರವಾಗಿ ನಿಲ್ಲದಿರುವುದು ವಿಷಾಧನೀಯ’
-ನ್ಯಾ.ವಿ.ಗೋಪಾಲಗೌಡ, ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ