ಬಿಟ್‍ಕಾಯಿನ್ ಹಗರಣ: ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಕೆ
ಸಾಂದರ್ಭಿಕ ಚಿತ್ರ | Image by starline on Magnific
ಬೆಂಗಳೂರು : ಬಿಟ್‍ಕಾಯಿನ್ ಹಗರಣದಲ್ಲಿ ಸಿಲುಕಿದ್ದ ನಾಲ್ವರು ಪ್ರಮುಖ ಪೊಲೀಸ್ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಗೃಹ ಇಲಾಖೆಯು ಪೂರ್ವಾನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ‘ಬಿ-ರಿಪೋರ್ಟ್’ ಸಲ್ಲಿಸಿದ್ದಾರೆ.
ಡಿವೈಎಸ್‍ಪಿ ಶ್ರೀಧರ್ ಪೂಜಾರ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಚಂದ್ರಾಧರ್, ಡಿ.ಎಂ.ಪ್ರಶಾಂತ್ ಬಾಬು ಮತ್ತು ಲಕ್ಷ್ಮೀ ಕಾಂತಯ್ಯ ದೋಷಾರೋಪ ಪಟ್ಟಿಯಿಂದ ಮುಕ್ತಿ ಪಡೆದುಕೊಂಡಿದ್ದಾರೆ.
2020-21ರಲ್ಲಿ ಸದ್ದು ಮಾಡಿದ್ದ ಈ ಹಗರಣದಲ್ಲಿ, ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಎಂಬಾತನನ್ನು ಅಕ್ರಮ ಬಂಧನದಲ್ಲಿಟ್ಟು, ಆತನ ಮೂಲಕ ಬಿಟ್‍ಕಾಯಿನ್ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಈ ಅಧಿಕಾರಿಗಳ ಮೇಲಿತ್ತು. ಅಧಿಕಾರಿಗಳು ಸೈಬರ್ ತಜ್ಞ ಸಂತೋಷ್ ಕುಮಾರ್ ಜೊತೆ ಶಾಮೀಲಾಗಿ, ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಎಂಬುವರ ಕ್ರಿಪ್ಟೊ ವ್ಯಾಲೆಟ್‍ಗಳನ್ನು ದುರ್ಬಳಕೆ ಮಾಡಿಕೊಂಡಿದ್ದರು. ಈ ಮೂಲಕ ಬರೋಬ್ಬರಿ 1.83 ಕೋಟಿ ರೂಪಾಯಿ ಮೌಲ್ಯದ ಬಿಟ್‍ಕಾಯಿನ್‍ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದರು ಎಂದು ಎಸ್‍ಐಟಿ ತನಿಖೆ ನಡೆಸಿತ್ತು.
ಇದೀಗ ಗೃಹ ಇಲಾಖೆ ಯಾವುದೇ ಸರಕಾರಿ ಅಧಿಕಾರಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕಾದರೆ ಗೃಹ ಇಲಾಖೆಯ ಪೂರ್ವಾನುಮತಿ ಕಡ್ಡಾಯ. ಆದರೆ, ಈ ಅಧಿಕಾರಿಗಳ ವಿರುದ್ಧದ ಅಭಿಯೋಜನಾ ಮಂಜೂರಾತಿ ಪ್ರಸ್ತಾವವನ್ನು ಗೃಹ ಇಲಾಖೆ ತಿರಸ್ಕರಿಸಿದೆ. ಅನುಮತಿ ಸಿಗದ ಕಾರಣ ಸಿಐಡಿ ಎಸ್‍ಐಟಿ ಅನಿವಾರ್ಯವಾಗಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿ, ನಾಲ್ಕೂ ಜನ ಅಧಿಕಾರಿಗಳನ್ನು ದೋಷಾರೋಪ ಪಟ್ಟಿಯಿಂದ ಕೈಬಿಟ್ಟಿದೆ.