×
Ad

ಖ್ಯಾತ ಧಾರ್ಮಿಕ ವಿದ್ವಾಂಸ ಮೌಲಾನಾ ಮುಸ್ತಫಾ ರಿಫಾಈ ಜೀಲಾನಿ ನಿಧನ

Update: 2025-02-27 18:23 IST

ಹಝ್ರತ್ ಮೌಲಾನಾ ಶಾ ಖಾದ್ರಿ ಸೈಯದ್ ಮುಸ್ತಫಾ ರಿಫಾಯಿ ಜೀಲಾನಿ ನದ್ವಿ

ಬೆಂಗಳೂರು : ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಸಂಸ್ಥಾಪಕ ಸದಸ್ಯ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ಹಝ್ರತ್ ಮೌಲಾನಾ ಶಾ ಖಾದ್ರಿ ಸೈಯದ್ ಮುಸ್ತಫಾ ರಿಫಾಈ ಜೀಲಾನಿ ನದ್ವಿ(78) ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಮುಸ್ತಫಾ ರಿಫಾಈ ಅವರ ತಲೆಗೆ ಐದು ತಿಂಗಳ ಹಿಂದೆ ನ್ಯೂರೋ ಸರ್ಜರಿ ನಡೆಸಲಾಗಿತ್ತು. ಅಂದಿನಿಂದಲೂ ಅವರು ಕೋಮದಲ್ಲಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೃತರು ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬಂಧು, ಬಳಗವನ್ನು ಅಗಲಿದ್ದಾರೆ.

ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮುಸ್ತಫಾ ರಿಫಾಈ ಜೀಲಾನಿ, ಇಸ್ಲಾಮಿಕ್ ಫಿಕ್ ಅಕಾಡಮಿ ಆಫ್ ಇಂಡಿಯಾದ ಸಂಸ್ಥಾಪಕ ಸದಸ್ಯ, ಇಂಟರ್ ನ್ಯಾಷನಲ್ ಲೀಗ್ ಆಫ್ ಇಸ್ಲಾಮಿಕ್ ಲಿಟ್ರೇಚರ್ ಕರ್ನಾಟಕ ಚಾಪ್ಟರ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಇನ್ಸ್ಟಿಟ್ಯೂಟ್ ಆಫ್ ಆಬ್ಜೆಕ್ಟಿವ್ ಸ್ಟಡೀಸ್‌ನ ಗರ‍್ನಿಂಗ್ ಕೌನ್ಸಿಲ್ ಸದಸ್ಯ ಹಾಗೂ ಪೀಸ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನಗರದ ಮಿಲ್ಲರ್ಸ್‌ ರಸ್ತೆಯಲ್ಲಿರುವ ಮಸ್ಜಿದೆ ಖಾದ್ರಿಯಾ ಆವರಣದಲ್ಲಿ ಗುರುವಾರ ಸಂಜೆ ಮಗ್ರಿಬ್ ನಮಾಝ್ ನಂತರ ಶುಕ್ರವಾರ ಮಧ್ಯಾಹ್ನದ ನಮಾಝ್ ವರೆಗೆ ಮುಸ್ತಫಾ ರಿಫಾಈ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ ನಮಾಝ್ ಬಳಿಕ ಖುದ್ದೂಸ್ ಸಾಹೇಬ್ ಖಬರಸ್ತಾನ್‌ನಲ್ಲಿ ದಫನ್ ಕಾರ್ಯ ನೆರವೇರಲಿದೆ ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಪದಾಧಿಕಾರಿ ಸುಲೇಮಾನ್ ಖಾನ್ ‘ವಾರ್ತಾಭಾರತಿ’ಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News