×
Ad

ಮೆಟ್ರೋ ಪ್ರಯಾಣ ದರ ಏರಿಕೆಗೆ ವ್ಯಾಪಕ ಆಕ್ರೋಶ; ಜಾಲತಾಣಗಳಲ್ಲಿ #RevokeMetroFareHike ಅಭಿಯಾನ

Update: 2025-02-10 21:37 IST

ಸಾಂದರ್ಭಿಕ ಚಿತ್ರ 

ಬೆಂಗಳೂರು: ರಾಜಧಾನಿ ಬೆಂಗಳೂರಿನ ನಿವಾಸಿಗಳ ನೆಚ್ಚಿನ ಸಾರಿಗೆ ವ್ಯವಸ್ಥೆಯಾದ ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ದರ ಇಳಿಕೆ ಮಾಡುವಂತೆ ಪ್ರಯಾಣಿಕರು ಹಾಗೂ ಸಂಘಟನೆಗಳು ಒತ್ತಾಯಿಸಿವೆ.

ಕೇಂದ್ರ ಸರಕಾರವು ಸಮಿತಿಯ ಶಿಫಾರಸ್ಸಿನ ಮೇರೆಗೆ ಮೆಟ್ರೋ ಪ್ರಯಾಣ ದರವನ್ನು ಏಕಾಏಕಿ ಶೇ.47ರಷ್ಟು ಹೆಚ್ಚಳಗೊಳಿಸಿದ್ದು, ದೇಶದ ಇತರ ನಗರಗಳ ಮೆಟ್ರೋ ಪ್ರಯಾಣ ದರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತಿಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ #RevokeMetroFareHike ಅಭಿಯಾನವನ್ನು ಆರಂಭಿಸಿದ್ದಾರೆ.

ವಿದ್ಯಾರ್ಥಿಗಳು, ಸರಕಾರಿ ನೌಕರರು, ಖಾಸಗಿ ನೌಕರರು ಸೇರಿದಂತೆ ಲಕ್ಷಾಂತರ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಪ್ರತಿದಿನದ ಪಾಸ್ ಪಡೆದು ಪ್ರಯಾಣಿಸುವವರು ಹಲವರಿದ್ದಾರೆ. ಮಾಸಿಕ ಪಾಸ್ ಪಡೆದು ಹಲವರು ಪ್ರಯಾಣಿಸುತ್ತಾರೆ. ಎಲ್ಲದರ ದರವೂ ಏರಿಕೆಯಾಗಿದೆ. ಈ ನಡುವೆ ಏಕಾಏಕಿ ಮೆಟ್ರೋ ಪ್ರಮಾಣದ ದರ ಏರಿಕೆ ಅಗತ್ಯವಿತ್ತೇ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇನ್ನು 2017 ರಿಂದ ಮೆಟ್ರೋ ದರ ಏರಿಕೆ ಮಾಡಿರಲಿಲ್ಲ. ಈಗ ದರ ಏರಿಕೆ ಮಾಡಲಾಗಿದೆ. ಟಿನ್ ಫ್ಯಾಕ್ಟರಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ನಿಲ್ದಾಣಕ್ಕೆ ಪ್ರತಿ ದಿನ 30 ರೂ. ಕೊಟ್ಟು ಓಡಾಡುತ್ತಿದ್ದ ಪ್ರಯಾಣಿಕರು ಇಂದು ಏಕಾಏಕಿ 60 ರೂ.ಗಳನ್ನು ಕೊಡಬೇಕಾಗಿದೆ. ಶೇ.5ರಷ್ಟು ಪ್ರಯಾಣ ದರ ಏರಿಸಿದರೆ ಪರವಾಗಿಲ್ಲ. ಆದರೆ ಶೇ.45ರಿಂದ 50ರಷ್ಟು ಪ್ರಯಾಣ ದರ ಏರಿಸಿದರೆ ಹೇಗೆ ನಾವು ಪ್ರಯಾಣಿಸುವುದು ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಆಕ್ರೋಶವನ್ನು ಮನಗಂಡು ಬಿಜೆಪಿ ಶಾಸಕರಾದ ಸಿ.ಕೆ.ರಾಮಮೂರ್ತಿ, ರವಿಸುಬ್ರಹ್ಮಣ್ಯ, ಉತ್ತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಸ್. ಹರೀಶ್ ಮತ್ತು ಮಾಜಿ ಮೇಯರ್ ಗೌತಮ್ ಕುಮಾರ್ ಮತ್ತಿತರರ ನಿಯೋಗ ಸೋಮವಾರ ನಮ್ಮ ಮೆಟ್ರೋ ಪ್ರಧಾನ ಕಚೇರಿಗೆ ಭೇಟಿ ನೀಡಿ, ಪ್ರಯಾಣ ದರ ಇಳಿಸುವಂತೆ BMRCL ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿಪತ್ರ ಸಲ್ಲಿಸಿದೆ.

ಮನವಿಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಕೆ. ರಾಮಮೂರ್ತಿ, ಬಿಜೆಪಿ ನಿಯೋಗದಿಂದ ಮೆಟ್ರೋ ಟಿಕೆಟ್ ದರ ಏರಿಕೆ ನಿರ್ಧಾರ ವಾಪಸ್ ಪಡೆಯುವಂತೆ ಮನವಿ ಮಾಡಿದ್ದೇವೆ. ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿ ಪ್ರಯಾಣಿಕರ ಮೇಲೆ ಹೊರೆ ಆಗುವ ಬಗ್ಗೆ ವಿವರಿಸಿದ್ದೇವೆ. ಯಾವುದೋ ಸಮಿತಿಯ ವರದಿ ಪಡೆದು ದರ ಏರಿಕೆ ಮಾಡಿದ್ದಾರೆ. ದರ ಏರಿಕೆ ಕಡಿಮೆ ಮಾಡಿದಿದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದೇವೆ. ಪ್ರಯಾಣಿಕರಿಗೆ ಹೆಚ್ಚು ಹೊರೆಯಾಗದಂತೆ ಏರಿಸಲಿ ಹೇಳಿದ್ದೇವೆ ಎಂದರು.

‘ಮೆಟ್ರೋ ಸಂಪಾದನೆ ಮಾಡುವ ಇಲಾಖೆಯಲ್ಲ, ಸೇವಾ ವಲಯ ಇದು; ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಮೆಟ್ರೊ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಏಕಾಏಕಿ ದರ ಏರಿಕೆಯನ್ನು ನಾವು ಖಂಡಿಸುತ್ತೇವೆ. ಈಗಾಗಲೇ ರಾಜ್ಯ ಸರಕಾರ ಜನರ ಮೇಲೆ ದರ ಏರಿಕೆಯ ಬರೆ ಎಳೆದಿದೆ. ಈಗ ಮೆಟ್ರೋ ದರ ಶೇ.46ರಷ್ಟು ಏರಿಕೆ ಮಾಡಿ ಪ್ರಹಾರ ಮಾಡಲಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಜನರಿಗೆ ಅಗತ್ಯ ಅನುಕೂಲಗಳನ್ನೂ ಮೆಟ್ರೋ ಮಾಡಲಿ’

-ರವಿಸುಬ್ರಹ್ಮಣ್ಯ, ಬಿಜೆಪಿ ಶಾಸಕ

ದರ ಹೆಚ್ಚಳ ಸ್ಥಗಿತಗೊಳಿಸದಿದ್ದರೆ ಹೋರಾಟ:

ಮೆಟ್ರೋ ಸಾರ್ವಜನಿಕರಿಗಾಗಿ ಇದೆ. ಲಾಭವನ್ನೇ ನೋಡುವುದು ಸರಿಯಲ್ಲ; ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಬೇಕು ಎಂಬ ದೃಷ್ಟಿಯಿಂದ ಇದು ಜಾರಿಯಾಗಿದೆ. ಅದಕ್ಕಾಗಿ ಕೇಂದ್ರ ಸರಕಾರ ಅನುದಾನ ನೀಡಿದೆ. ಪ್ರಯಾಣದರ ಹೆಚ್ಚಳ ಸರಿಯಲ್ಲ. ದರ ಹೆಚ್ಚಳ ಕೂಡಲೇ ಸ್ಥಗಿತಗೊಳಿಸಬೇಕು. ಜನರಿಗೆ ಬೇಕಿರುವ ಪಾಕಿರ್ಂಗ್ ನೀಡಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಎಚ್ಚರಿಕೆ ನೀಡಿದರು.

ʼಮೆಟ್ರೋ ದರ ಹೆಚ್ಚಳ ಮೋದಿ ಸರಕಾರದ ಕೊಡುಗೆʼ:

‘ಮೆಟ್ರೋ ಪ್ರಯಾಣ ದರ ಹೆಚ್ಚಳವು ದಿಲ್ಲಿಯ ಚುನಾವಣೆಯ ನಂತರ ಮೋದಿ ಸರಕಾರ ಬೆಂಗಳೂರಿಗರಿಗೆ ನೀಡುತ್ತಿರುವ ಕೊಡುಗೆಯಾಗಿದ್ದು, ಈ ಮೂಲಕ ಕೇಂದ್ರ ಸರಕಾರವು ಜನವಿರೋಧಿ ನಿಲುವನ್ನು ಸ್ಪಷ್ಟಪಡಿಸುತ್ತಿದೆ. ದೇಶದ ಆರ್ಥಿಕತೆ ಕುಸಿಯುತ್ತಿರುವ ಕಾಲಘಟ್ಟದಲ್ಲಿ ಬೆಂಗಳೂರಿನಂತಹ ವಿಶ್ವಮಟ್ಟದ ನಗರದಲ್ಲಿ ಮೆಟ್ರೋ ಸಂಚಾರದಿಂದಾಗಿ ಸಂಚಾರದ ಒತ್ತಡ ಕಡಿಮೆ ಮಾಡುವ ಮೂಲ ಆಶಯವನ್ನೇ ಮೆಟ್ರೋ ನಿಗಮ ಹಾಗೂ ರಾಜ್ಯ, ಕೇಂದ್ರ ಸರಕಾರಗಳು ಮರೆತಿರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದು ಎಎಪಿ ರಾಜ್ಯ ಘಟಕ ಟೀಕಿಸಿದೆ.

ʼನಾನು ಬಸ್‍ನಲ್ಲಿ ಬರುತ್ತೇನೆʼ

‘ನಾನು ಪ್ರತಿದಿನ ಮೂರ್ನಾಲ್ಕು ಬಾರಿ ಮೆಟ್ರೋದಲ್ಲಿ ಪ್ರಯಾಣಿಸುತ್ತೇನೆ. ದರ ಏರಿಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನು ಮುಂದೆ ನಾನು ಮೆಟ್ರೋದಲ್ಲಿ ಬರಲ್ಲ, ಬಿಎಂಟಿಸಿ ಬಸ್‍ನಲ್ಲಿ ಬರುತ್ತೇವೆ. ಸಂಚಾರ ದಟ್ಟಣೆಯನ್ನು ತಗ್ಗಿಸುತ್ತಿದ್ದ ಮೆಟ್ರೋ ನಮ್ಮಂತಹ ನೌಕರರಿಗೆ ಹೆಚ್ಚು ಅನುಕೂಲವಾಗಿತ್ತು. ಈಗ ಅದಕ್ಕೂ ಸರಕಾರ ಬರೆ ಎಳೆಯಿತು.

-ಉಮೇಶ, ಮೆಟ್ರೋ ಪ್ರಯಾಣಿಕ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News