×
Ad

ನಾಗರಿಕ ಸಮಾಜ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯ: ಎಂ.ಐ.ಖಾಲಿದ್ ಸೈಫುಲ್ಲಾ ರಹ್ಮಾನಿ

Update: 2024-02-04 23:39 IST

ಬೆಂಗಳೂರು: ಮುಸ್ಲಿಮ್ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಸಮಾಜ ಸುಧಾರಣೆಗೆ ಮುಂದಾಗಬೇಕು ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಅಧ್ಯಕ್ಷರೂ ಆದ ಖ್ಯಾತ ಇಸ್ಲಾಮಿಕ್ ವಿದ್ವಾಂಸ ಮೌಲಾನ ಎಂ.ಐ.ಖಾಲಿದ್ ಸೈಫುಲ್ಲಾ ರಹ್ಮಾನಿ ಹೇಳಿದ್ದಾರೆ.

ರವಿವಾರ ಬೆಂಗಳೂರು ದಾರುಲ್ ಉಲೂಮ್ ಸಬೀಲುರ್ ರಶಾದ್‌ನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಶರೀಅತ್ ತಿಳುವಳಿಕೆ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರಿಕ ಸಮಾಜದ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ನುಡಿದರು.

ಶರೀಅತ್ ತತ್ವ, ಇದರಲ್ಲಿನ ಕಾನೂನಿನ ಅಂಶ, ವಿಷಯದ ಬಗ್ಗೆ ತಾವು ಮಾತ್ರ ತಿಳಿದುಕೊಳ್ಳದೇ, ಇತರರಿಗೂ ಈ ಬಗ್ಗೆ ಅರಿವು ಮೂಡಿಸಬೇಕು. ಈಗಾಗಲೇ ಹಲವು ರಾಜ್ಯಗಳಲ್ಲಿ ಶರೀಅತ್ ತತ್ವಗಳು, ಅದರಲ್ಲಿನ ಪ್ರಾಮುಖ್ಯತೆ ಕುರಿತು ಮುಸ್ಲಿಮರಲ್ಲಿ ಅರಿವು ಮುಡಿಸುವ ಕೆಲಸ ನಡೆಯುತ್ತಿದೆ. ಕರ್ನಾಟದಲ್ಲೂ ಈ ರೀತಿ ಚಟುವಟಿಕೆಗಳು, ಜನಜಾಗೃತಿ ಹೆಚ್ಚಾಗಬೇಕು ಎಂದು ಅವರು ಹೇಳಿದರು.

ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಮುಖ್ಯ ಉದ್ದೇಶ ಶರೀಅತ್ ರಕ್ಷಣೆಯಾಗಿದೆ. ಇದಕ್ಕಾಗಿ ಪ್ರತ್ಯೇಕ ಇಲಾಖೆಗಳನ್ನು ರಚಿಸಲಾಗಿದೆ. ಕಾನೂನು ಸಮಿತಿಯೂ ಇದ್ದು, ಹಿರಿಯ ವಕೀಲರ ತಂಡವನ್ನೇ ನೇಮಿಸಲಾಗಿದೆ. ಸದ್ಯ ಹಲವು ಪ್ರಕರಣಗಳ ಇತ್ಯರ್ಥಕ್ಕೆ ಪಣತೊಡಲಾಗಿದೆ. ಮತ್ತೊಂದೆಡೆ, ದಾರುಲ್-ಖಾಜಾ ವಿಭಾಗ ಆರಂಭಿಸಲಾಗಿದ್ದು, ಇಲ್ಲಿ ಶರೀಅತ್ ಅನ್ನು ಕಾರ್ಯಗತಗೊಳಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ)ಯ ಶರೀಅ ಸಂರಕ್ಷಣಾ ವಿಭಾಗದ ಮುಫ್ತಿ ಉಮರ್ ಎ. ಮಾತನಾಡಿ, ಪ್ರತಿನಿತ್ಯ ಮುಸ್ಲಿಮರನ್ನು, ಇಸ್ಲಾಮ್ ಧರ್ಮವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹವರ ವಿರುದ್ಧ ಸಾಂವಿಧಾನಿಕ ಹೋರಾಟ ನಡೆಸಲಾಗುವುದು. ಇನ್ನೂ, ಶರೀಅತ್ ಕುರಿತು ಅರಿವಿಲ್ಲದ ಕೆಲವರು ಈ ಬಗ್ಗೆ ತಪ್ಪುಮಾಹಿತಿ ಹರಡುವುದು, ವ್ಯಂಗ್ಯವಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ಮಾತನಾಡಿ, ಶರೀಅತ್ ಅನ್ನು ಅರ್ಥಮಾಡಿಕೊಂಡು ಅದನ್ನು ಅನುಸರಿಸಿದರೆ ಇತರರಿಗೆ ವಿವರಿಸಲು ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ನಾಸಿಹ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ಮೌಲಾನ ಸೈಯದ್ ಶಬ್ಬೀರ್ ನದ್ವಿ, ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಮೌಲಾನ ಅಬ್ದುಲ್ ಖದೀರ್ ವಾಜಿದ್, ಮೌಲಾನ ಇಜಾಝ್ ಅಹ್ಮದ್ ನದ್ವಿ, ವಕೀಲರು, ಚಿಂತಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News