ಹಳೇ ಮೀಸಲಾತಿಯಂತೆ ಖಾಲಿ ಹುದ್ದೆಗಳು ಭರ್ತಿ : ಸಚಿವ ಮಹದೇವಪ್ಪ
ಡಾ.ಎಚ್.ಸಿ.ಮಹದೇವಪ್ಪ
ದಾವಣಗೆರೆ : ರಾಜ್ಯದಲ್ಲಿ ಕೆಎಟಿಯಿಂದ ಎಸ್‌ಸಿ ಎಸ್‌ಟಿ ಮೀಸಲಾತಿಯನ್ನು ಶೇ.56ರಷ್ಟು ಹೆಚ್ಚಿಸಿದ್ದರ ವಿರುದ್ಧ ತಡೆಯಾಜ್ಞೆ ತಂದಿದ್ದರು. ಈಗ ಹಳೇ ಮೀಸಲಾತಿಯಂತೆ ನೇಮಕಾತಿ ಮಾಡುವಂತೆ ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಧರಣಿ ನಡೆಸಲಾಗುತ್ತಿದೆ. ಆದ್ದರಿಂದ ಹಳೆಯ ಮೀಸಲಾತಿಯಂತೆ ನೇಮಕಾತಿ ಮಾಡುವಂತೆ ಸೂಚಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲೇ ಐದಾರು ಸಾವಿರ ಹುದ್ದೆಗಳು ಖಾಲಿ ಇವೆ. ಹೊರ ಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರಮೇಣ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತೇವೆ ಎಂದರು.
ನಾವು ಅಧಿಕಾರಕ್ಕೆ ಬಂದ ನಂತರ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳನ್ನು ಸುಧಾರಿಸಿದ್ದೇವೆ. ವಸತಿಯುತ ಶಾಲೆಗಳಿಗೆ ಹೆಚ್ಚು ಬೇಡಿಕೆ ಇದೆ. ಪ್ರತಿ ಹೋಬಳಿಗೊಂದು ವಸತಿ ಶಾಲೆ ನೀಡಬೇಕೆಂಬ ಆಲೋಚನೆ ಇದೆ. ಇನ್ನೂ 60-65 ಹೋಬಳಿಗಳಲ್ಲಿ ವಸತಿ ಶಾಲೆಗಳು ಸ್ಥಾಪನೆಯಾಗಬೇಕಿದೆ ಎಂದು ಹೇಳಿದರು.
ಇಲಾಖೆ ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ಪೂರೈಸುತ್ತಿರುವ ಬಗ್ಗೆ ಉಪ ಲೋಕಾಯುಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೆಲ್ಲಾ ಜನರಲೈಸ್ಡ್ ಮಾಡುವುದಕ್ಕೆ ಆಗುವುದಿಲ್ಲ. ಕೆಲವೊಂದು ಕಡೆ ಇಂತಹ ಘಟನೆಗಳು ನಡೆದಿವೆ. ಮೆನು ಚಾರ್ಟ್ ಕಡ್ಡಾಯವಾಗಿ ಹಾಕುವಂತೆ ಸೂಚನೆ ನೀಡಿದ್ದೇವೆ. ಹಾಸ್ಟೆಲ್‌ಗಳಲ್ಲಿ ಏನು ಊಟ ನೀಡುತ್ತಿದ್ದಾರೆಂಬುದಕ್ಕೆ ಸಾಫ್ಟ್‌ವೇರ್ ಡೆವಲಪ್ ಮಾಡಿದ್ದೇವೆ. ಪಾರದರ್ಶಕತೆ ಇರಬೇಕೆಂದು ಹೀಗೆ ಮಾಡಿದ್ದೇವೆ ಎಂದು ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆಯೆಂದು ಲೋಕಾಯುಕ್ತಕ್ಕೆ ದೂರು ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಇಲಾಖೆಯಲ್ಲಿ ಅಂತಹದ್ದೆಲ್ಲಾ ನಡೆದಿಲ್ಲ. ನಾನು ಅಧಿಕಾರ ವಹಿಸಿಕೊಂಡ ನಂತರ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದೇನೆ. ಯಾವುದೇ ಅವ್ಯವಹಾರ ನಡೆದಿಲ್ಲ. ಗೈಡ್ ಲೈನ್ಸ್ ಪ್ರಕಾರವೇ ಎಲ್ಲವೂ ನಡೆದಿದೆ. ಇಲಾಖೆಯಲ್ಲಿ ಬಳಕೆಯಾಗದೇ ಅನುದಾನ ವಾಪಸ್ ಬಂದಿಲ್ಲವೆಂಬ ಆರೋಪವಿದೆ. ನಮ್ಮ ಇಲಾಖೆಯಲ್ಲಿ ಎಸ್‌ಸಿಪಿ-ಟಿಎಸ್‌ಪಿನಲ್ಲಿ ಬರುವ ಅನುದಾನ ನಾನ್ ಲ್ಯಾಪ್ಸೇಬಲ್ ಗ್ರ್ಯಾಂಟ್ ಆಗಿರುತ್ತದೆ ಎಂದರು.
‘ಸಿಎಂ ಬದಲಾವಣೆ ಇಲ್ಲ’
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಯಾವುದೇ ಬದಲಾವಣೆ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ಮುಂದಾಗಲಿ, ಪಕ್ಷದ ಮುಂದಾಗಲಿ ಬೇರೆ ಯಾವುದೇ ಆಲೋಚನೆಗಳೂ ಇಲ್ಲ. ಪಕ್ಷದ ಮುಂದೆ ಬದಲಾವಣೆಯಂತಹ ವಿಷಯವೇ ಇಲ್ಲದಿದ್ದಾಗ ಅಂತೆ ಕಂತೆಗಳ ಬಗ್ಗೆ ಮಾತಾದರೂ ಯಾಕೆ ಎಂದು ಅವರು ಪ್ರಶ್ನಿಸಿದರು.
ಯಾರಿಗೂ ಗೊಂದಲ ಇರಬಾರದೆಂಬ ಕಾರಣಕ್ಕಾಗಿಯೇ ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಾಗಲೀ, ಕುರ್ಚಿ ಕಿತ್ತಾಟವಾಗಲೀ ಇಲ್ಲ. ಹೈಕಮಾಂಡ್ ಏನು ಹೇಳುತ್ತದೋ, ಹಾಗೆಯೇ ಮಾಡಿ, ಐದು ವರ್ಷ ಕಾಲ ಸರಕಾರವನ್ನು ನಡೆಸುತ್ತೇವೆ ಎಂದರು.
ಶಾಸಕರು ಈಗಾಗಲೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯನವರೇ ನಾಯಕರು ಅಂತಾ ಹೇಳಿ ಆಗಿದೆ. ಹಾಗಾಗಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರೇ ಮುಂದುವರಿಯುತ್ತಾರೆ. ನಿಮಗೆ ಅನುಮಾನ ಯಾಕೆ? ನಮಗ್ಯಾರಿಗೂ ಯಾವುದೇ ಡೌಟ್ ಇಲ್ಲ. ಅಷ್ಟಕ್ಕೂ ಸಿಎಂ ಕುರ್ಚಿಯಿಂದ ಸಿದ್ದರಾಮಯ್ಯಗೆ ಎದ್ದೇಳಿಸಲು ಕಾರಣವಾದರೂ ಏನಿದೆ ಎಂದು ಪ್ರಶ್ನಿಸಿದರು.
ನಮ್ಮ ಸರಕಾರ ಐದು ವರ್ಷ ಸ್ಥಿರವಾಗಿರುತ್ತದೆ. ಮತ್ತೆ 2028ರ ವಿಧಾನಸಭೆ ಚುನಾವಣೆಯಲ್ಲಿ ಇದೇ ರೀತಿ ಬಹುಮತದಿಂದ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಸ್ವಾಮೀಜಿಗಳು ಏನೇನು ಹೇಳುತ್ತಾರೋ, ಅದೇ ಸ್ವಾಮೀಜಿಗಳನ್ನೇ ಕೇಳಿಕೊಳ್ಳಿ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ ಸಂವಿಧಾನ ಅಷ್ಟೇ ನಮಗೆ ಗೊತ್ತು. ದಲಿತರಿಗೆ ಶಕ್ತಿ ಬರಬೇಕು. ಅಂಬೇಡ್ಕರ್ ಹೇಳಿದ್ದು, ಸಂವಿಧಾನ ಬಯಸಿದ್ದೂ ಅದನ್ನೇ ಎಂದು ಸಂಪುಟ ಪುನಾರಚನೆಯಲ್ಲಿ ದಲಿತರಿಗೆ ಹೆಚ್ಚು ಸ್ಥಾನಮಾನ ಸಿಗಬೇಕೆಂಬ ಮಾತನ್ನು ಅವರು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ, ಕವಿತಾ ಚಂದ್ರಶೇಖರ ಇತರರಿದ್ದರು.