×
Ad

ಬೆಂಗಳೂರು | ಅನಸ್ತೇಶಿಯಾ ನೀಡಿ ಪತ್ನಿಯನ್ನೇ ಹತ್ಯೆಗೈದ ವೈದ್ಯನ ಬಂಧನ

ಆರು ತಿಂಗಳ ಬಳಿಕ ಪ್ರಕರಣ ಬಯಲಿಗೆ

Update: 2025-10-15 19:01 IST

 ಡಾ.ಕೃತಿಕಾ ರೆಡ್ಡಿ/ ಡಾ.ಮಹೇಂದ್ರ ರೆಡ್ಡಿ

ಬೆಂಗಳೂರು, ಅ.15 : ಅನಸ್ತೇಶಿಯಾ ನೀಡಿ ಪತ್ನಿಯನ್ನು ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ವೈದ್ಯನೊಬ್ಬನನ್ನು ಇಲ್ಲಿನ ಮಾರತಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬಂಧಿತನನ್ನು ಡಾ.ಮಹೇಂದ್ರ ರೆಡ್ಡಿ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಡಾ.ಕೃತಿಕಾ ರೆಡ್ಡಿ ಅವರಿಗೆ ಅನಸ್ತೇಶಿಯಾ ನೀಡಿ ಆಕೆಯ ತವರು ಮನೆಯಲ್ಲೇ ಹತ್ಯೆ ಮಾಡಿದ್ದ. ಬಳಿಕ ಇದು ಸಹಜ ಸಾವು ಎಂಬಂತೆಯೇ ಆರೋಪಿ ಬಿಂಬಿಸಿದ್ದ ಎಂದು ತಿಳಿದುಬಂದಿದೆ.

ಈ ಪ್ರಕರಣವು ಆರು ತಿಂಗಳ ಬಳಿಕ ಬಯಲಿಗೆ ಬಂದಿದ್ದು, ಡರ್ಮೆಟಾಲಜಿಸ್ಟ್ ಆಗಿದ್ದ ಕೃತಿಕಾ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಮಹೇಂದ್ರ ರೆಡ್ಡಿ ಸಹ ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ. 2024ರ ಮೇ 26ರಂದು ಮಹೇಂದ್ರ ರೆಡ್ಡಿ ಮತ್ತು ಕೃತಿಕಾ ರೆಡ್ಡಿಗೆ ಮದುವೆಯಾಗಿತ್ತು. ಕೃತಿಕಾ ರೆಡ್ಡಿಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಸಮಸ್ಯೆ ಇತ್ತು. ಈ ವಿಚಾರ ಮಹೇಂದ್ರ ರೆಡ್ಡಿಗೆ ತಿಳಿಸದೆ ಮದುವೆ ಮಾಡಿದ್ದರು ಎನ್ನಲಾಗಿದೆ. ಮದುವೆಯಾದ ಬಳಿಕ ಈ ವಿಚಾರ ಮಹೇಂದ್ರ ರೆಡ್ಡಿಗೆ ಗೊತ್ತಾಗಿತ್ತು. ಇದೇ ಕಾರಣಕ್ಕೆ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ತಂದೆ ಮನೆಯಲ್ಲಿ ಹುಷಾರಿಲ್ಲದೇ ಮಲಗಿದ್ದ ಕೃತಿಕಾ ರೆಡ್ಡಿಗೆ ಆರೋಪಿ ಐವಿ ಇಂಜೆಕ್ಷನ್ ಮೂಲಕ ಒಂದಷ್ಟು ಮೆಡಿಸಿನ್ ನೀಡಿದ್ದ. ಎರಡು ದಿನ ನಿರಂತರ ಮೆಡಿಸಿನ್ ನೀಡಲಾಗಿತ್ತು. ಬಳಿಕ 2025ರ ಎ.23ರಂದು ಅವರು ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು.

ಘಟನೆ ಬಳಿಕ ಆಸ್ಪತ್ರೆಯಿಂದ ಡೆತ್ ಮೆಮೊ ಬಂದಿದ್ದ ಹಿನ್ನೆಲೆ, ಸ್ಥಳಕ್ಕೆ ಮಾರತಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ, ಕುಟುಂಬದಿಂದ ದೂರು ಪಡೆದು ಯುಡಿಆರ್ ಪ್ರಕರಣ ದಾಖಲು ಮಾಡಿದ್ದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹದ ಸ್ಯಾಂಪಲ್‍ನ್ನು ಎಫ್‍ಎಸ್‍ಎಲ್‍ಗೆ ಕಳಿಸಲಾಗಿತ್ತು. ಎಫ್‍ಎಸ್‍ಎಲ್ ವರದಿಯಲ್ಲಿ ಅನಸ್ತೇಶಿಯಾ ಅಂಶಗಳು ಪತ್ತೆಯಾಗಿದ್ದು, ಸಾವಿಗೆ ಇದೇ ಕಾರಣ ಎಂದು ತಿಳಿದು ಬಂದಿತ್ತು.

ಸದ್ಯ ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News