×
Ad

ಕರಾವಳಿ ಪ್ರವಾಸೋದ್ಯಮ ಗಟ್ಟಿಗೊಳಿಸಲು ಶೀಘ್ರದಲ್ಲೇ ಹೊಸ ನೀತಿ ಜಾರಿ: ಡಿಕೆ ಶಿವಕುಮಾರ್

ಬೆಂಗಳೂರಿನಲ್ಲಿ ನೂರುಲ್‌ ಹುದಾ ಎಜ್ಯು ಕಾನ್ಫರೆನ್ಸ್‌, ಪ್ರಶಸ್ತಿ ಪ್ರದಾನ, 2035 ಯೋಜನೆಗಳ ಅನಾವರಣ

Update: 2025-08-22 18:50 IST

ಬೆಂಗಳೂರು: ಶೈಕ್ಷಣಿಕವಾಗಿ ಮುಂದುವರಿದ ಕರಾವಳಿಯ ಜನತೆಯು ಉದ್ಯೋಗದ ಕೊರತೆಯಿಂದ ತಾಯ್ನಾಡನ್ನು ತೊರೆಯುತ್ತಿರುವುದಕ್ಕೆ ಅಲ್ಲಿನ ಕೋಮು ಧ್ರುವೀಕರಣದ ವಾತಾವರಣ ಕಾರಣವಾಗಿದ್ದು, ಉದ್ಯೋಗ ಸೃಷ್ಠಿ ಹಾಗೂ ಪ್ರವಾಸೋ‍ದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಸಭೆ ಸೇರಿ ಹೊಸ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಾಡನ್ನೂರು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರುಲ್‌ ಹುದಾ ಶಿಕ್ಷಣ ಸಂಸ್ಥೆಯ ಸ್ಥಾಪಕ ದಿನದ ಅಂಗವಾಗಿ ಬೆಂಗಳೂರಿನ ಪ್ರತಿಷ್ಠಿತ ಲಲಿತ್‌ ಅಶೋಕ್‌ ಹೋಟೆಲ್‌ ನಲ್ಲಿ “ಎಜ್ಯು ಕಾನ್ಫರೆನ್ಸ್‌” ಎಂಬ ಶೈಕ್ಷಣಿಕ ಸಮಾವೇಶದಲ್ಲಿ ಸಂಸ್ಥೆಯ 2035 ಯೋಜನೆಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ಶಿಕ್ಷಣದ ಮೂಲಕ ಸಮಾಜದದಲ್ಲಿ ನಾಯಕರನ್ನು ಸೃಷ್ಟಿಸುವ ನಿಟ್ಟಿನಲ್ಲಿ ನೂರುಲ್‌ ಹುದಾ ಸಂಸ್ಥೆಯು ಹೊಸ ಯೋಜನೆಗಳನ್ನು ರೂಪಿಸಿರುವುದು ಬಹಳ ಹೆಮ್ಮೆಯ ವಿಷಯ. ಹಿಂಬಾಲಕರನ್ನು ಸೃಷ್ಟಿಸುವ ಬದಲು ನಾಯಕರನ್ನು ರೂಪಿಸುವ ಕೆಲಸವಾಗಬೇಕಾದದ್ದು ಭವಿಷ್ಯದ ದೃಷ್ಠಿಯಲ್ಲಿ ಅತ್ಯುತ್ತಮ ಯೋಜನೆಯಾಗಿದೆ ಎಂದು ಹೇಳಿದರು.

ಎನ್‌ಇಪಿಯು ಗುಪ್ತ ಅಜೆಂಡಗಳ ಮೂಲಕ ಹುಟ್ಟಿಕೊಂಡ ಶಿಕ್ಷಣ ಪದ್ಧತಿಯಾಗಿದ್ದು, ಅದರ ಬದಲಾಗಿ ಕರ್ನಾಟಕ ಶಿಕ್ಷಣ ಪಾಲಿಸಿಯನ್ನು ನಾವು ಜಾರಿ ತಂದಿದ್ದೇವೆ. ಸಂವಿಧಾನವು ನಮ್ಮ ಅಜೆಂಡವಾಗಿದ್ದು, ಭಾವನಾತ್ಮಕ ವಿಷಯಗಳ ಮೂಲಕ ಸಮಾಜವನ್ನು ಒಡೆಯುವ ಕೆಲಸ ನಾವು ಮಾಡುವುದಿಲ್ಲ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ನಮ್ಮ ಮಾತು, ಕೃತಿಗಳು ಸಮಾಜವನ್ನು ಒಟ್ಟುಗೂಡಿಸಬೇಕೇ ಹೊರತು ಒಡೆಯಬಾರದು. ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ನೆಮ್ಮದಿ ಸೃಷ್ಟಿಯಾಗಲು ಸಾ‍ಧ್ಯ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯಾಧ್ಯಕ್ಷರಾದ ಪಾಣಕ್ಕಾಡ್ ಮುನವ್ವರಲಿ ಶಿಹಾಬ್ ತಂಙಳ್ ಮಾತನಾಡಿ, ಧಾರ್ಮಿಕ - ಲೌಖಿಕ ಸಮನ್ವಯ ಶಿಕ್ಷಣ ರಂಗದಲ್ಲಿ ದಾರುಲ್‌ ಹುದಾ ವಿಶ್ವವಿದ್ಯಾನಿಲಯ ಹಾಗೂ ಅದರ ಸಹಸಂಸ್ಥೆಗಳು ಮಾಡಿದ ಸಾಧನೆಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಭಾಷಣಗೈದ ಸಂಸ್ಥೆಯ ಪ್ರಾಂಶುಪಾಲರಾದ ಅಡ್ವ. ಹನೀಫ್‌ ಹುದವಿ, ನೂರುಲ್‌ ಹುದಾ ಸಂ‍ಸ್ಥೆಯು ಕೇವಲ ಕಟ್ಟಡಗಳಲ್ಲ, ಅದೊಂದು ಚಳುವಳಿಯಾಗಿದೆ. ಕರುನಾಡಿನಲ್ಲಿ ಪ್ರತಿಯೊಂದು ಜಿಲ್ಲೆಗಳಲ್ಲಿರುವ ಮುಸ್ಲಿಮರ ಸಬಲೀಕರಣಕ್ಕಾಗಿ ಶಿಕ್ಷಣ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಅಗತ್ಯವಾದ ಯೋಜನೆಗಳನ್ನೊಳಗೊಂಡ ಮಿಷನ್‌ 2023 ಸಿದ್ಧಗೊಳಿಸಿ ದೊಡ್ಡದಾದ ಕನಸಿನೊಂದಿಗೆ ರಂಗಕ್ಕಿಳಿದಿದ್ದೇವೆ. ಇದನ್ನು ದಡಸೇರಿಸಲು ಎಲ್ಲರ ಸಹಕಾರವನ್ನು ಕೋರಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ನಸೀರ್‌ ಅಹ್ಮದ್‌, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಶಾಂತಿನಗರ ಶಾಸಕರಾದ ಎನ್.ಎ. ಹಾರಿಸ್, ವಿಧಾನ ಪರಿಷತ್‌ ಸದಸ್ಯರಾದ ಅಬ್ದುಲ್ ಜಬ್ಬಾರ್, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್. ಮೆಹ್ರೋಝ್ ಖಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಬೆಳಗಾವಿ ಉತ್ತರ ಶಾಸಕರಾದ ಆಸಿಫ್ ಶೇಠ್ ಮುಂತಾದವರು ಅಲ್ಪಸಂ‍ಖ್ಯಾತ ಸಮುದಾಯದ ಶೈಕ್ಷಣಿಕ ಬೆಳವಣಿಗೆಗಳ ಅನಿವಾರ್ಯತೆಯ ಕುರಿತು ಮಾತನಾಡಿದರು.

ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್‌ ಫೈಝಿ ತೋಡಾರು ಅನುಗ್ರಹ ಭಾಷಣಗೈದರು.

ಬೆಂಗಳೂರಿನ ಫಾಲ್ಕನ್ ಸಂಸ್ಥೆಯ ಅಧ್ಯಕ್ಷರಾದ ಡಾ. ಅಬ್ದುಲ್ ಸುಭಾನ್ ವಿಷಯ ಮಂಡಿಸಿದರು. ವ್ಯವಸ್ಥಾಪಕರಾದ ಖಲೀಲುರ್ರಹ್ಮಾನ್‌ ಅರ್ಷದಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ನೂರುಲ್ ಹುದಾ ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್, ಕೆಪಿಸಿಸಿ ಕಾರ್ಯದರ್ಶಿ ಎಂಎಸ್.‌ ಮುಹಮ್ಮದ್‌ ವಿಟ್ಲ, ಟಿ.ಎಂ. ಶಹೀದ್‌ ತೆಕ್ಕಿಲ್‌, ಸುಳ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಜನತಾ, ಅಡ್ವ. ಮುಝಫ್ಫರ್ ಅಹ್ಮದ್, ಶಂಸುದ್ದೀನ್‌ ಸುಳ್ಯ ಶುಭಹಾರೈಸಿದರು.


ಎಜ್ಯು ಎಕ್ಸಲೆನ್ಸ್‌ ಅವಾರ್ಡ್:‌-

ನೂರುಲ್‌ ಹುದಾ ಪ್ರದಾನಿಸುವ ಎಜ್ಯು ಎಕ್ಸಲೆನ್ಸ್‌ ಅವಾರ್ಡ್‌ ಮತ್ತು ಪ್ರಶಸ್ತಿ ಪತ್ರವನ್ನು ಬೆಂಗಳೂರು ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಿಸಾರ್ ಅಹ್ಮದ್, ಅವರಿಗೆ ಪಾಣಕ್ಕಾಡ್‌ ಮುನವ್ವರ್‌ ಅಲಿ ಶಿಹಾಬ್‌ ತಂಙಳ್‌ ಪ್ರದಾನ ಮಾಡಿದರು.

ಪುಸಕ್ತ ಬಿಡುಗಡೆ :-

ಸಂಸ್ಥೆಯ ವಿದ್ಯಾರ್ಥಿ ಸಂಘಟನೆ ಹೊರತರುವ ಚಿಗುರು ಮಾಸಿಕವನ್ನು ಬೆಂಗಳೂರು ಜಿಲ್ಲಾ ಎಸ್‌ವೈಎಸ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹಾಜಿ ಅವರು ಎಐಕೆಎಮ್‌ಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ನೌಷಾದ್ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.

ಸಂಸ್ಥೆಯ ಪದವಿ ವಿದ್ಯಾರ್ಥಿಗಳು ಹೊರತಂದ “ವ್ಯಾಜಿಯೋ” ವಿಶೇಷ ಸಂಚಿಕೆಯನ್ನು ಬೆಂಗಳೂರು ಸಮಸ್ತ ಕೋರ್ಡಿನೇಶನ್‌ ಅಧ್ಯಕ್ಷರಾದ ಎ.ಕೆ. ಅಶ್ರಫ್‌ ಹಾಜಿಯವರು ಬೆಂಗಳೂರು ಎಸ್‌ಕೆ ಬಿಲ್ಡರ್ಸ್ & ಡೆವಲಪರ್ಸ್ ಮುಖ್ಯಸ್ಥ ಕರೀಂ ಸಾಬ್ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.

ಸಂಸ್ಥೆಯ ವಿದ್ಯಾರ್ಥಿ ರಚಿಸಿದ “ಮರಣೋತ್ತರ ಸಂಚಾರ” ಪುಸ್ತಕದ ಎರಡನೇ ಆವೃತ್ತಿಯನ್ನು ಮೈಸೂರು ಜಿಲ್ಲೆ ವಕ್ಫ್ ಬೋರ್ಡ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ (ಅಜ್ಜು ಭಾಯಿ) ಬಿಡುಗಡೆಗೊಳಿಸಿದರು.

ಸನ್ಮಾನ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಮುಲ್ಕಿ, ಕೆಪಿಸಿಸಿ ಕಾರ್ಯದರ್ಶಿ ಹೇಮನಾಥ ಶೆಟ್ಟಿ ಕಾವು, ಬೆಂಗಳೂರು ತಾಜ್ ಬಾಟಾ ಉಮರುಲ್ ಫಾರೂಕ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಅಹ್ಮದ್ ಹುಸೇನ್, ಕೆಪಿಸಿಸಿ ಸಂಯೋಜಕ ಸುಹೈಲ್ ಕಂದಕ್ , ಬೆಂಗಳೂರು ಬಿಸಿಸಿಸಿ ಅಧ್ಯಕ್ಷ ಶಬೀರ್ ಬ್ರಿಗೇಡ್, ರಾಜ್ಯ ವಕ್ಫ್‌ ಬೋರ್ಡ್‌ ಉಪಾಧ್ಯಕ್ಷ ಸಿದ್ದೀಕ್‌ ರಝ್ವೀ, ಖಾಝಿ ಮುಹಮ್ಮದ್‌ ಬೆಂಗಳೂರು, ಕರ್ನಾಟಕ ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕ ಅಡ್ವ. ಅಬ್ದುಲ್ ಲತೀಫ್ , ಕೆಪಿಸಿಸಿ ಕಾರ್ಯದರ್ಶಿ ಯಾಕೂಬ್‌ ಬಜಗುಂಡಿ, ಅಬ್ದುಲ್ಲಾ ಸ್ವದೇಶಿ ಬೆಂಗಳೂರು‌, ಬೆಂಗಳೂರು ಎಮ್‌ವೈಸಿಸಿ ಅಧ್ಯಕ್ಷ ಅಬ್ದುಲ್ ಖಾದರ್, ಬಪ್ಪನಾಡು ಫೌಂಡೇಶನ್ ಅಧ್ಯಕ್ಷ ರಿಝ್ವಾನ್, ಅಬ್ದುಲ್ಲಾ ಮಾವಳ್ಳಿ, ಟಿ. ಉಸ್ಮಾನ್ ಬ್ರೀಝ್, ಬೆಂಗಳೂರು, ನೂರುಲ್‌ ಹುದಾ ಪದಾಧಿಕಾರಿಗಳಾದ ಮಂಗಳ ಅಬೂಬಕ್ಕರ್‌ ಹಾಜಿ, ಹಿರಾ ಅಬ್ದುಲ್‌ ಖಾದರ್‌ ಹಾಜಿ, ಅಬ್ದುಲ್‌ ಖಾದರ್‌ ಬಯಂಬಾಡಿ, ಮಂಡೆಕೋಲು ಇಬ್ರಾಹೀಂ ಹಾಜಿ, ಇಸ್ಮಾಯೀಲ್‌ ಹಾಜಿ ನೆಕ್ಕರೆ, ಅಲಿ ಉಸ್ತಾದ್‌ ಬನ್ನೂರು ಸೇರಿದಂತೆ ಉಲಮಾಗಳು, ರಾಜಕೀಯ ಮುಖಂಡರು, ಉದ್ಯಮಿಗಳು ಹಾಗೂ ಶಿಕ್ಷಣಾಸಕ್ತರು ಪಾಲ್ಗೊಂಡಿದ್ದರು.






Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News