ಹರೀಶ್ ಪೂಂಜಾ ಸಮಾಜವನ್ನು ಒಡೆಯುತ್ತಿದ್ದಾರೆ: ವೆಲ್ಫೇರ್ ಪಾರ್ಟಿ
Update: 2024-02-10 22:20 IST
ಬೆಂಗಳೂರು: ‘ಹಿಂದುಗಳ ತೆರಿಗೆ ಹಣ ಹಿಂದುಗಳ ಅಭಿವೃದ್ಧಿಗೆ ಮಾತ್ರವೇ ಬಳಸಬೇಕು’ ಎನ್ನುವ ಮೂಲಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತನ್ನ ಸಂಕುಚಿತ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಅಜ್ಞಾನದಿಂದ ಭಾರತೀಯರನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರೀಶ್ ಪೂಂಜಾಗೆ ಪ್ರಜಾಪ್ರಭುತ್ವದ ಕುರಿತು ಪಾಠ ಮಾಡಿ ನಮ್ಮ ಸಂವಿಧಾನದ ಮಹತ್ವದ ಬಗ್ಗೆ ಅರ್ಥೈಸಬೇಕು. ಭಾರತದ ಬಹುತ್ವದ ಸಂಸ್ಕೃತಿಗಳ ಭಾವೈಕ್ಯದ ಬಗೆಗೆ ಇರುವ ಅರಿವಿನ ಕೊರತೆಯೇ ಇಂತಹ ಹೇಳಿಕೆಗಳಿಗೆ ಕಾರಣ. ಕೋಮು ಅಮಲು ಮಾತ್ರ ತಲೆಯಲ್ಲಿ ತುಂಬಿಕೊಂಡು ಸಮಾಜ ಒಡೆಯುವಂತಹ ರಾಜಕಾರಣಿಗಳು ದೇಶಕ್ಕೆ ಅಪಾಯಕಾರಿ. ಜನಪ್ರತಿನಿಧಿಗಳು ಪ್ರಜಾಪ್ರಭುತ್ವ ತತ್ವವನ್ನು ಅರ್ಥೈಸಿ ಸಾಮರಸ್ಯದ ಸಹಬಾಳ್ವೆಯ ಭಾರತದ ನಿರ್ಮಾಣಕ್ಕೆ ಪ್ರಯತ್ನಿಸಲಿ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.