ಶಾಸಕರ ಅಧ್ಯಕ್ಷತೆಯ ‘ಶಿಕ್ಷಣ ಸುಧಾರಣಾ ಸಮಿತಿ’ ರಚನೆ ಆದೇಶ ಹಿಂಪಡೆಯಲು ʼಫಾಫ್ರೆʼ ಆಗ್ರಹ
ಪ್ರೊ.ನಿರಂಜನಾರಾಧ್ಯ
ಬೆಂಗಳೂರು : ಶಿಕ್ಷಣ ಹಕ್ಕು ಕಾಯಿದೆಯನ್ನು ಉಲ್ಲಂಘಿಸಿ ರಾಜ್ಯ ಸರಕಾರವು ಶಾಸಕರ ಅಧ್ಯಕ್ಷತೆಯಲ್ಲಿ ಶಿಕ್ಷಣ ಸುಧಾರಣಾ ಸಮಿತಿ ರಚನೆಗೆ ಹೊರಡಿಸಿರುವ ಆದೇಶ ಮತ್ತು ಜ್ಞಾಪನ ಪತ್ರವನ್ನು ಕೂಡಲೇ ಹಿಂಪಡೆಯಬೇಕು ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಫಾಫ್ರೆ) ಸಂಘಟನೆಯು ಆಗ್ರಹಿಸಿದೆ.
ಸೋಮವಾರ ಸಂಘಟನೆಯ ಸಂಚಾಲಕ ಹಾಗೂ ಅಭಿವೃದ್ಧಿ ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ. ಪ್ರಕಟನೆ ಹೊರಡಿಸಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರೌಢ ಶಿಕ್ಷಣ ನಿರ್ದೇಶಕರು ಜ.18ರಂದು ತಾಲ್ಲೂಕು ಮಟ್ಟದಲ್ಲಿ ಶಿಕ್ಷಣ ಸುಧಾರಣಾ ಸಮಿತಿ ರಚಿಸಲು ಡಿಡಿಪಿಐ ಮತ್ತು ಬಿಇಒಗಳು ಕ್ರಮವಹಿಸಲು ಹೊರಡಿಸಿರುವ ಜ್ಞಾಪನ ಪತ್ರವು ಕಾನೂನುಬಾಹಿರವಾಗಿದೆ. ಅದು ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 9, 21 ಮತ್ತು 22 ರ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಸರಕಾರ ಈ ರೀತಿಯ ಆದೇಶ ಹಾಗು ಜ್ಞಾಪನಗಳನ್ನು ಹೊರಡಿಸುವಾಗ ಸಂವಿಧಾನದ ಅಡಿಯಲ್ಲಿ ರಚನೆಯಾಗಿರುವ ಕಾನೂನನ್ನು ಉಲ್ಲಂಘಿಸಬಾರದು ಎಂಬ ಕನಿಷ್ಠ ಕಾಳಜಿ ಮತ್ತು ಜವಾಬ್ದಾರಿಯನ್ನು ಮರೆತು ಮನಬಂದಂತೆ ಆದೇಶ ಹೊರಡಿಸಿದೆ. ಆದೇಶದಲ್ಲಿ ಶಿಕ್ಷಣ ಸುಧಾರಣಾ ಸಮಿತಿಗೆ ಗೊತ್ತುಪಡಿಸಿರುವ ಕಾರ್ಯಗಳನ್ನು ಈಗಾಗಲೇ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 9ರ ಅಡಿಯಲ್ಲಿ ಸ್ಥಳೀಯ ಸರಕಾರಗಳಾದ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಿಗೆ ಕಾನೂನು ಬದ್ಧವಾಗಿ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಸರಕಾರಗಳಿಗೆ ಕಾನೂನುದತ್ತವಾಗಿ ನೀಡಿರುವ ಅಧಿಕಾರವನ್ನು ಕಸಿದು ಶಾಸಕರ ನೇತೃತ್ವದ ಸಮಿತಿಗೆ ವಹಿಸುವುದು, ಸಂವಿಧಾನದ ಅರ್ಟಿಕಲ್ 21ಎ ಅಡಿ ಸ್ಥಾಪಿತವಾದ ಶಿಕ್ಷಣ ಹಕ್ಕು ಕಾಯಿದೆ 2009ರ ಸ್ಪಷ್ಟ ಉಲ್ಲಂಘನೆಯಾಗಿದೆ. ಜೊತೆಗೆ ಕಡಿಮೆ ಸಂಖ್ಯೆ ದಾಖಲಾತಿ ಹೊಂದಿರುವ ಸರಕಾರಿ ಶಾಲೆಗಳನ್ನು ಗುರುತಿಸಿ ಹತ್ತಿರದ ಸರಕಾರಿ ಶಾಲೆಗೆ ಸಂಯೋಜಿಸುವುದು ಸರಕಾರದ ಉದ್ದೇಶವಾಗಿದೆ. ನೆರೆಹೊರೆಯ ಸರಕಾರಿ ಶಾಲೆಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಶಾಸಕರ ನೇತೃತ್ವದಲ್ಲಿ ರಚಿಸುವ ಶಿಕ್ಷಣ ಸುಧಾರಣಾ ಸಮಿತಿಯು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಎಡೆಮಾಡಿಕೊಡುವುದಲ್ಲದೆ, ಶಾಲಾ ನಿರ್ವಹಣೆಯಲ್ಲಿ ಅನಗತ್ಯವಾಗಿ ಪಕ್ಷ ರಾಜಕಾರಣವನ್ನು ಬೆರೆಸಿ ಶಾಲೆಗಳ ಈಗಿನ ಆಡಳಿತ ಮತ್ತು ನಿರ್ವಹಣಾ ವ್ಯವಸ್ಥೆಗೆ ಧಕ್ಕೆ ಮಾಡುತ್ತದೆ. ಈ ಹಿಂದೆ ಹಿಜಾಬ್‍ನಂತಹ ವಿಷಯದಲ್ಲಿ ಉಂಟಾದ ರಾಜಕೀಯ ಗೊಂದಲ ಇಡೀ ಶಾಲಾ ಕಾಲೇಜಿನ ಸಾಮರಸ್ಯಕ್ಕೆ ಹಿನ್ನಡೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ಸರಕಾರದ ಸುತ್ತೋಲೆ ಮತ್ತು ಜ್ಞಾಪನ ಪತ್ರವನ್ನು ಕೂಡಲೇ ಹಿಂಪಡೆಯಬೇಕು. 2009ರ ಶಿಕ್ಷಣ ಹಕ್ಕು ಕಾಯಿದೆ ಮತ್ತು ರಾಜ್ಯ ಸರಕಾರದ 2012ರ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರಕಾರ ಕೂಡಲೇ ಒಂದು ನೀಲಿ ನಕಾಶೆಯನ್ನು ಸಿದ್ಧಪಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.