×
Ad

ಅಂಬೇಡ್ಕರ್ ಕೊಡುಗೆ ಮರೆತ ಯುವಪೀಳಿಗೆ : ಸಚಿವ ಪ್ರಿಯಾಂಕ್ ಖರ್ಗೆ ಕಳವಳ

Update: 2025-04-18 20:15 IST

ಬೆಂಗಳೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟಂತಹ ಸಂವಿಧಾನವನ್ನು, ಸ್ವಾಭಿಮಾನದ ಬದುಕನ್ನು, ಕಾನೂನನ್ನು ಇಂದಿನ ಯುವ ಪೀಳಿಗೆ ಮರೆತಿದ್ದು, ಕೇವಲ ಅವರನ್ನು ದಲಿತ ನಾಯಕರಾಗಿ ಗುರುತಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಶುಕ್ರವಾ ನಗರದ ಗಾಂಧಿ ಭವನದಲ್ಲಿ ಬಂಜಾರ ಮಹಾಸಭಾ ವತಿಯಿಂದ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸಾಮಾಜಿಕ ವ್ಯವಸ್ಥೆಗೆ ಸಮಾನತೆಯ ಸ್ಪರ್ಶ ನೀಡಿದ್ದು ಡಾ.ಬಿ.ಆರ್.ಅಂಬೇಡ್ಕರ್ ಎಂದು ತಿಳಿಸಿದರು.

ಭಾರತದ ಬಹುಜನರಿಗೆ ಸ್ವತಂತ್ರದ, ಸ್ವಾಭಿಮಾನದ ಹಾಗೂ ಘನತೆಯ ಬದುಕನ್ನು ಒದಗಿಸಿಕೊಟ್ಟ ಅಂಬೇಡ್ಕರ್ ಅವರ ಆದರ್ಶಗಳನ್ನು, ಚಿಂತನೆಗಳನ್ನು ಹೆಚ್ಚು ಹೆಚ್ಚು ಅರಿಯುವ ಮೂಲಕ ಸಮ ಸಮಾಜವನ್ನು ರೂಪಿಸೋಣ ಎಂದು ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

ಅಮೇರಿಕಾ, ಲಂಡನ್ ಸೇರಿದಂತೆ ಇತರೆ ಹೊರ ದೇಶಗಳಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡಲಾಗಿದ್ದು, ಅದೇ ನಮ್ಮ ಕರ್ನಾಟಕದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಈಗಲು ಹಿಂದೆಟು ಹಾಕುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಂವಿಧಾನದ ವಿವಿಧ ಅಂಶಗಳ ಕುರಿತು ಅಂಬೇಡ್ಕರ್ ಅವರ ಮಧ್ಯಸ್ಥಿಕೆಗಳು ಮತ್ತು ಭಾಷಣಗಳು ಒಳನೋಟವುಳ್ಳವು, ತಾರ್ಕಿಕ ಮತ್ತು ಸೂಕ್ಷ್ಮವಾಗಿ ಸಂಶೋಧಿಸಲ್ಪಟ್ಟವು ಎಂದು ಹೇಳಿದರು.

ಮಾಜಿ ಸಚಿವೆ, ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಅಂಬೇಡ್ಕರ್ ಅವರನ್ನು ಸಮಾಜ ಎಷ್ಟೇ ಅಪಮಾನ ಮಾಡಿದರು ಕೂಡ ಮನೆಯಲ್ಲಿ ಪೋಷಕರು ಮಗನ ಅಭ್ಯುಧ್ಯಕ್ಕಾಗಿ ತುಂಬಾ ಶ್ರಮಪಟ್ಟಿದ್ದಾರೆ. ಅವರ ಸಾಧನೆಯಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವವಾದದ್ದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯಕ್, ಬಂಜಾರ ಭಾಷಾ ಮತ್ತು ಸಂಸ್ಕøತಿ ಅಕಾಡಮೆ ಅಧ್ಯಕ್ಷ ಡಾ.ಎಂ.ಆರ್.ಗೋವಿಂದರಾಜು ಸೇರಿದಂತೆ ಬಂಜಾರ ಸಮುದಾಯದ ಮುಖಂಡರು, ಚಿಂತಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಬಂಜಾರ ಸಮುದಾಯದ ಸಂಜನಾಬಾಯಿ, ರಾಷ್ಟ್ರಪತಿ ಪದಕ ಪಡೆದ ಡಿವೈಎಸ್ಪಿ ಜಯರಾಜ್, ಮತ್ತು ಡಿವೈಎಸ್ಪಿ ಪದೋನ್ನತಿ ಪಡೆದ ಕೃಷ್ಣ ಲಮಾಣಿ ಅವರಿಗೆ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News