×
Ad

ಸರಕಾರಿ ಗೌರವಗಳೊಂದಿಗೆ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅಂತ್ಯಕ್ರಿಯೆ

Update: 2025-04-21 23:59 IST

ಬೆಂಗಳೂರು : ಸಕಲ ಸರಕಾರಿ ಗೌರವಗಳೊಂದಿಗೆ ಸೋಮವಾರ ಇಲ್ಲಿನ ವಿಲ್ಸನ್ ಗಾರ್ಡನ್‍ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಹತ್ಯೆಗೀಡಾದ ರಾಜ್ಯ ಪೊಲೀಸ್ ಮಹಾನಿರ್ದೇಶಕ (ನಿವೃತ್ತ) ಓಂ ಪ್ರಕಾಶ್ ಅವರಿಗೆ ವಿದಾಯ ನೀಡಲಾಯಿತು. 

ಓಂ ಪ್ರಕಾಶ್‍ರ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಇಲ್ಲಿನ ಎಚ್‍ಎಚ್‍ಆರ್ ಲೇಔಟ್‍ನ 6ನೆ ಹಂತದ ಎಂಸಿಎಚ್‍ಎಸ್ ಕ್ಲಬ್‍ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು, ಓಂ ಪ್ರಕಾಶ್ ಕುಟುಂಬಸ್ಥರು, ಸ್ನೇಹಿತರು, ಸಹದ್ಯೋಗಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಆನಂತರ, ಸರಕಾರಿ ಗೌರವಗಳೊಂದಿಗೆ ವಿಲ್ಸನ್ ಗಾರ್ಡನ್‍ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು.

ಎಫ್‍ಐಆರ್ ದಾಖಲು: ತಾಯಿ ಪಲ್ಲವಿ ಹಾಗೂ ಸಹೋದರಿ ಕೃತಿ ಅವರ ಮೇಲೆ ಶಂಕೆ ವ್ಯಕ್ತಪಡಿಸಿ ಓಂ ಪ್ರಕಾಶ್ ಪುತ್ರ ಕಾರ್ತಿಕೇಶ್ ನೀಡಿರುವ ದೂರಿನ್ವಯ ಇಲ್ಲಿನ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಈ ಸಂಬಂಧ ತನಿಖೆ ಮುಂದುವರೆದಿದೆ.

ನಮ್ಮ ತಾಯಿ ಪಲ್ಲವಿ ಅವರು ಒಂದು ವಾರದಿಂದಲೂ ತಂದೆ ಓಂ ಪ್ರಕಾಶ್‍ಗೆ ಕೊಲೆ ಬೆದರಿಕೆ ಹಾಕುತ್ತಿದ್ದರಿಂದ, ತಂದೆ ಓಂ ಪ್ರಕಾಶ್ ಅವರ ಸಹೋದರಿ ಸರೀತಾ ಕುಮಾರಿ ಅವರ ಮನೆಗೆ ಹೋಗಿದ್ದರು. 2 ದಿನಗಳ ಹಿಂದಷ್ಟೇ ನನ್ನ ಸಹೋದರಿ ಕೃತಿ, ಸರಿತಾ ಕುಮಾರಿಯವರ ಮನೆಗೆ ತೆರಳಿ ನಮ್ಮ ತಂದೆಯನ್ನು ಮರಳಿ ಮನೆಗೆ ಬರುವಂತೆ ಪೀಡಿಸಿ ಕರೆದುಕೊಂಡು ಬಂದಿದ್ದಳು.

ಹೀಗಿರುವಾಗ ರವಿವಾರ ನಾನು ದೊಮ್ಮಲೂರಿನಲ್ಲಿರುವ ಕರ್ನಾಟಕ ಗಾಲ್ಫ್ ಅಸೋಸಿಯೇಷನ್‍ನಲ್ಲಿರುವಾಗ ಸಂಜೆ 5 ಗಂಟೆಗೆ ನಮ್ಮ ಪಕ್ಕದ ಮನೆಯ ನಿವಾಸಿಯಾದ ಜಯಶ್ರೀ ಶ್ರೀಧರನ್ ಅವರು ಕರೆಮಾಡಿ ನಿಮ್ಮ ತಂದೆ ಓಂ ಪ್ರಕಾಶ್ ಅವರ ದೇಹ ಕೆಳಗಡೆ ಬಿದ್ದಿದೆ' ಎಂದು ತಿಳಿಸಿದರು. ಗಾಬರಿಯಿಂದ ನಾನು ಸಂಜೆ 5:45ರ ಸುಮಾರಿಗೆ ಮನೆಗೆ ತೆರಳಿ ನೋಡಿದಾಗ ಮನೆ ಬಳಿ ಪೊಲೀಸರು, ಸಾರ್ವಜನಿಕರು ಇದ್ದರು.

ನನ್ನ ತಂದೆ ಓಂ ಪ್ರಕಾಶ್ ಅವರ ತಲೆಗೆ ಮತ್ತು ಮೈತುಂಬ ರಕ್ತಸಿಕ್ತವಾಗಿದ್ದು, ದೇಹದ ಪಕ್ಕದಲ್ಲಿ ಒಡೆದಿರುವ ಬಾಟಲ್ ಹಾಗೂ ಚಾಕು ಇತ್ತು. ನಂತರ ಮೃತದೇಹವನ್ನು ಸೈಂಟ್ ಜಾನ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ನನ್ನ ತಾಯಿ ಪಲ್ಲವಿ ಹಾಗೂ ತಂಗಿ ಕೃತಿ ಅವರು ಖಿನ್ನತೆಯಿಂದ ಬಳಲುತ್ತಿದ್ದು, ಪ್ರತಿನಿತ್ಯ ತಂದೆಯೊಂದಿಗೆ ಜಗಳವಾಡುತ್ತಿದ್ದರು. ತಾಯಿ ಮತ್ತು ಸಹೋದರಿಯೇ ನನ್ನ ತಂದೆಯನ್ನು ಹತ್ಯೆಗೈದಿರುವ ಶಂಕೆಯಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News