ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ : ತನಿಖೆ ಸಿಸಿಬಿಗೆ ಹೆಗಲಿಗೆ
ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಹತ್ಯೆ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಸಿಸಿಬಿಗೆ ವರ್ಗಾಯಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುವಂತೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಎಸಿಪಿಗೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ನಿವೃತ್ತ ಡಿಜಿಪಿ ಕೊಲೆ ಹಿಂದೆ ಹಲವು ಕಾರಣಗಳು ಕೇಳಿಬರುತ್ತಿವೆ. ಪತಿಯಿಂದ ನಿರಂತರ ಕಿರುಕುಳ ಎಂಬುದು ಒಂದು ಆರೋಪವಾದರೆ ಮತ್ತೊಂದೆಡೆ ಪಲ್ಲವಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರಿಂದ ಭ್ರಮೆಯಲ್ಲಿ ಪತಿಯನ್ನ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆಸ್ತಿ ಕಲಹದಿಂದ ಓಂ ಪ್ರಕಾಶ್ ಅವರು ಕೊಲೆಯಾದಾರಾ ಎಂಬ ಅನುಮಾನವೂ ವ್ಯಕ್ತವಾಗಿದೆ. ಹತ್ಯೆಗೆ ನಿಖರ ಕಾರಣ ಹಾಗೂ ಆಳ ತನಿಖೆ ನಡೆಸಲು ಪ್ರಕರಣವನ್ನು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಸಿಸಿಬಿಗೆ ವರ್ಗಾಯಿಸಿ ಆದೇಶಿಸಿದ್ದಾರೆ.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿರುವ ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು, ವಿಚಾರಣೆ ವೇಳೆ ಪತ್ನಿ ಪಲ್ಲವಿ (64) ತಪ್ಪೊಪ್ಪಿಕೊಂಡಿದ್ದರಿಂದ ಅವರನ್ನು ಬಂಧಿಸಿದ್ದಾರೆ.