×
Ad

ಕನ್ನಡ ನಾಡು ನುಡಿ ಲೇಖಕರ, ಓದುಗರ ಸಹಕಾರ ಸಂಘ, ಲಡಾಯಿ, ಅಭಿರುಚಿ ಪ್ರಕಾಶನಕ್ಕೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ

Update: 2025-04-22 22:39 IST

ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ 2022ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಲಡಾಯಿ ಪ್ರಕಾಶನ, 2023ನೇ ಸಾಲಿಗೆ ಅಭಿರುಚಿ ಪ್ರಕಾಶನ ಹಾಗೂ 2024ನೇ ಸಾಲಿನ ಪ್ರಶಸ್ತಿಗೆ ಕನ್ನಡ ನಾಡು ನುಡಿ ಲೇಖಕರ, ಓದುಗರ ಸಹಕಾರ ಸಂಘ ಆಯ್ಕೆಯಾಗಿವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2022ನೇ ಸಾಲಿನ ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಯನ್ನು ಪ್ರೊ.ಪಿ.ವಿ.ನಂಜರಾಜ ಅರಸ್, 2023ನೇ ಸಾಲಿನ ಪ್ರಶಸ್ತಿಯನ್ನು ಡಾ.ಇಂದಿರಾ ಹೆಗ್ಗಡೆ ಹಾಗೂ 2024ನೇ ಸಾಲಿನ ಪ್ರಶಸ್ತಿಗೆ ಕೆ.ರವೀಂದ್ರನಾಥ ಹೊಸಪೇಟೆ ಅವರು ಭಾಜನರಾಗಿದ್ದಾರೆ ಎಂದು ತಿಳಿಸಿದರು.

2022ನೇ ಸಾಲಿನ ಡಾ.ಜಿ.ಪಿರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಪ್ರೊ.ಬಿ.ಜಯಪ್ರಕಾಶಗೌಡ, 2023ನೇ ಸಾಲಿಗೆ ಮೇಟಿ ಕೊಟ್ರಪ್ಪ ಹಗರಿ ಬೊಮ್ಮನಹಳ್ಳಿ, 2024ನೇ ಸಾಲಿಗೆ ರಂಗನಾಥ ಮೈಸೂರು ಅವರು ಭಾಜನರಾಗಿದ್ದಾರೆ ಎಂದು ಮಾಹಿತಿ ನೀಡಿದರು.

2022ನೇ ಸಾಲಿನ ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಹರಿಪ್ರಸಾದ್ ಮೈಸೂರು, 2023ನೇ ಸಾಲಿನ ಪ್ರಶಸ್ತಿಗೆ ಡಾ.ಎಸ್.ಎಸ್.ಗುಬ್ಬಿ, 2024ನೇ ಸಾಲಿನ ಪ್ರಶಸ್ತಿಗೆ ಡಾ.ಕರವೀರಪ್ರಭು ಕ್ಯಾಲಕೊಂಡ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯು 1ಲಕ್ಷ ರೂ. ನಗದು, ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ 75 ಸಾವಿರ ರೂ. ನಗದು, ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ 50 ಸಾವಿರ ರೂ. ನಗದು, ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಶಾಲು, ಹಾರದ ಮೂಲಕ ಗೌರವಿಸಲಾಗುವುದು ಎಂದು ಹೇಳಿದರು.

ಸಿಎಂ, ಡಿಸಿಎಂ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವರ ದಿನಾಂಕವನ್ನು ನೋಡಿಕೊಂಡು ಮೇ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕಿರಣ್‍ಸಿಂಗ್, ಸದಸ್ಯರಾದ ಲಕ್ಷ್ಮಣ ಕೊಡಸೆ, ಬಿ.ಎಚ್.ನೀರಗುಡಿ, ಡಾ.ಶರಣಪ್ಪ ಕೋಲ್ಕಾರ, ಡಾ.ಬಿ.ಸಿ.ಕುಶಾಲ, ಅಕ್ಷತಾ.ಕೆ ಮತ್ತಿತರರು ಉಪಸ್ಥಿತರಿದ್ದರು.

ಎಸ್.ಎಸ್.ಹಿರೇಮಠ, ಚಂದ್ರಶೇಖರ್ ಪಾಟೀಲ್, ಡಾ.ಎಂ.ಚಿದಾನಂದ ಮೂರ್ತಿ, ಡಾ.ಚನ್ನವೀರ ಕಣವಿ, ಡಾ.ಅರವಿಂದ ಮಾಲಗತ್ತಿ ಅವರ ಸಮಗ್ರ ಸಂಪುಟಗಳನ್ನು ಹೊರತರಲಾಗುವುದು. ಜತೆಗೆ ಡಾ.ಸಿದ್ದಲಿಂಗಯ್ಯ, ಡಾ. ಶಂಭಾ ಜೋಶಿ ಅವರ ಸಂಪುಟಗಳನ್ನು ಪುನರ್ ಮುದ್ರಣ ಮಾಡಲಾಗುವುದು.

-ಡಾ.ಮಾನಸ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News