×
Ad

ಕರ್ನಲ್ ಸೋಫಿಯಾ ಖುರೇಶಿ ಕುರಿತು ವಿವಾದಿತ ಹೇಳಿಕೆ: ಬಿಜೆಪಿ ಸಚಿವ ವಿಜಯ್ ಶಾ ಗಡಿಪಾರಿಗೆ ಆಗ್ರಹ : ಪ್ರತಿಕೃತಿ ದಹನ

Update: 2025-05-15 21:52 IST

ಬೆಂಗಳೂರು : ಪಾಕಿಸ್ತಾನದ ದಾಳಿಯನ್ನು ದಿಟ್ಟತನದಿಂದ ಎದುರಿಸಿದ ‘ಆಪರೇಷನ್ ಸಿಂಧೂರ’ ತಂಡದ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷವು ಬುಧವಾರ ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಮುಂಭಾಗ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹನ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಬಿಜೆಪಿಯ ರಣಹೇಡಿಗಳು ಮಹಿಳೆಯರನ್ನು ಅಪಮಾನಿಸುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಸದೆಬಡೆದ ದಿಟ್ಟ ಮಹಿಳೆ ಕರ್ನಲ್ ಸೋಫಿಯಾ ಖುರೇಶಿ ಅವರನ್ನು ಇಂದು ಅಪಮಾನಿಸಿರುವುದು ದೇಶದ ನಾಗರಿಕ ಸಮಾಜವನ್ನು ಅಪಮಾನಗೊಳಿಸಿದಂತಾಗಿದೆ ಎಂದು ಖಂಡಿಸಿದರು.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಮುಂದಾಗಿದ್ದ ಕರ್ನಲ್ ಸೋಫಿಯಾ ಖುರೇಶಿ ಅವರ ದಿಟ್ಟತನವನ್ನು ಇಡೀ ವಿಶ್ವವೇ ಮೆಚ್ಚಿದೆ. ಆದರೂ ಬಿಜೆಪಿ ನಾಯಕರು ತನ್ನ ಹಿಂದಿನ ಕೋಮು ಭಾವನೆಯನ್ನು ಈ ಮೂಲಕ ಪ್ರಚಾರ ಪಡಿಸಿಕೊಳ್ಳುವ ಸಲುವಾಗಿ ಖುರೇಶಿ ಅವರನ್ನು ಅಪಮಾನಗೊಳಿಸಿರುವುದು ದುರಂತ ಎಂದು ಎಸ್.ಮನೋಹರ್ ತಿಳಿಸಿದರು.

ಕೂಡಲೇ ದೇಶದ್ರೋಹಿ ವಿಜಯ್ ಶಾನನ್ನು ಗಡಿಪಾರು ಮಾಡಬೇಕು ಮತ್ತು ಆತನನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ದೇಶದ್ರೋಹಿಗಳಿಗೆ ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ಅವರು ನೇರ ಬೆಂಬಲ ನೀಡುತ್ತಿದ್ದಾರೆ ಎಂಬುವ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಎಸ್.ಮನೋಹರ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಮುಖಂಡರಾದ ಎಂ.ಎ.ಸಲೀಂ, ಎ.ಆನಂದ್, ಪ್ರಕಾಶ್, ಉಮೇಶ್, ಕೆ.ಟಿ. ನವೀನ್, ಸುಂಕದಕಟ್ಟೆ ನವೀನ್, ಓಬಳೇಶ್, ನವೀನ್ ಸಾಯಿ, ಪುಟ್ಟರಾಜು, ಕುಶಾಲ್ ಹರುವೇಗೌಡ, ಪ್ರವೀಣ್, ಸಂಜಯ್ ಸಶಿಮಠ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News