×
Ad

ಬೆಂಗಳೂರಿನಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

Update: 2025-05-19 13:07 IST

PC: x.com/IEBengaluru

ಬೆಂಗಳೂರು, ಮೇ.19: ಬೆಂಗಳೂರಿನಾದ್ಯಂತ ದಾಖಲೆಯ ಮಳೆಯಾಗಿದ್ದು, ಕಳೆದ ಎರಡು ದಿನಗಳಿಂದ ರಾತ್ರಿ ಸುರಿದ ಭಾರೀ ಮಳೆಗೆ ರಾಜಧಾನಿ ಬೆಂಗಳೂರಿನ ಚಿತ್ರಣವೇ ಬದಲಾಗಿದೆ. ರಾತ್ರಿಯಿಂದ ಬೆಳಿಗ್ಗೆ 5:30 ರವರೆಗೆ 104 ಮಿ.ಮೀ. ಮಳೆಯಾಗಿರುವ ಬಗ್ಗೆ ದಾಖಲಾಗಿದೆ. ಹಲವು ಲೇಔಟ್, ಕೆಳಸೇತುವೆ, ರಸ್ತೆಯಲ್ಲಿ ಜಲಾವೃತ್ತ ಗೊಂಡು ನಿವಾಸಿಗಳನ್ನು ಟ್ರಾಕ್ಟರ್, ಬೋಟ್ ಗಳಲ್ಲಿ ಸ್ಥಳಾಂತರ ಮಾಡಲಾಗಿದೆ.

ಕಳೆದ 10 ವರ್ಷಗಳಲ್ಲಿ ಮೇ ತಿಂಗಳಿನಲ್ಲಿ ದಾಖಲಾಗಿರುವ ಅತಿ ಹೆಚ್ಚು ಮಳೆ ಇದಾಗಿದೆ. ಹವಾಮಾನ ಇಲಾಖೆ ಮುಂದಿನ 5 ದಿನ ಮತ್ತಷ್ಟು ಮಳೆಯಾಗುವ ಎಚ್ಚರಿಕೆ ನೀಡಿದ್ದು, ನಗರದಲ್ಲಿ ರಾತ್ರಿ ಅಥವಾ ಸಂಜೆ ಬಳಿಕ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಇಂದು ಕೂಡ ಬೆಂಗಳೂರಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ನಗರದಲ್ಲಿ ರವಿವಾರ ಸುರಿದ ಮಳೆಗೆ ಜನರು ಬೆಚ್ಚಿ ಬಿದಿದ್ದಾರೆ. ಮಳೆಯಿಂದಾಗಿ ಬೆಂಗಳೂರಿನ ಸಾಯಿಲೇಔಟ್​​, ಕೋರಮಂಗಲ, ಮಾನ್ಯತಾ ಟೆಕ್ ಪಾರ್ಕ್, ಶಾಂತಿ ನಗರದ ಕೆಲ ಭಾಗಗಳು, ಸಾರಕ್ಕಿ, ಯಾರಬ್ ನಗರ, ಗೋರಪ್ಪನಪಾಳ್ಯ, ಜೆಜೆಆರ್ ನಗರ ಸೇರಿದಂತೆ ಬಹುತೇಕ ಭಾಗ ಜಲಾವೃತಗೊಂಡಿದ್ದು, ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

 ಪ್ರಮುಖವಾಗಿ ಚಾಮರಾಜಪೇಟೆಯಲ್ಲಿ ಸಿಸಿಬಿ ಕಚೇರಿಯ ಹಳೆ ಕಟ್ಟದ ಶಿಥಿಲಾವಸ್ಥೆ ತಲುಪಿದ್ದರಿಂದ ಶಾಂತಿನಗರದಲ್ಲಿರುವ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸಲಾಗಿತ್ತು. ಆದರೆ, ತಡರಾತ್ರಿ ಮಳೆಯಿಂದಾಗಿ ಶಾಂತಿನಗರದಲ್ಲಿರುವ ಸಿಸಿಬಿ ಕಚೇರಿಗೂ ನೀರು ನುಗ್ಗಿದೆ. ಕಚೇರಿಯ ಕೆಳ ಮಹಡಿಯಲ್ಲಿ ಮಂಡಿ ಆಳದಷ್ಟು ನೀರು ನಿಂತಿದ್ದು, ಬೆಳಗ್ಗೆಯವರೆಗೂ ನೀರಿನ ಮಟ್ಟ ಕಡಿಮೆಯಾಗಿರಲಿಲ್ಲ. ನೀರು ನುಗ್ಗಿರುವುದರಿಂದ ಕೆಲ ಕಡತಗಳು ಹಾನಿಗೊಳಗಾಗಿವೆ ಎನ್ನಲಾಗುತ್ತಿದ್ದು, ತನಿಖಾ ಕಾರ್ಯಾಚರಣೆಗೆ ತೊಂದರೆಯಾಗಿದೆ. 

ರಾಜಕಾಲುವೆ ನೀರು ರಸ್ತೆ ತುಂಬಿ ಮನೆಗಳಿಗೂ ನುಗ್ಗಿದೆ. ಹಾಗಾಗಿ ಜನರು ಹೊರಗೆ ಬಾರದೆ ಮನೆಯಲ್ಲಿ ಉಳಿಯುವಂತಾಗಿದೆ. ಇನ್ನು ಸಾಯಿ ಲೇಔಟ್​ನ ಕಾವೇರಿ ನಗರದ ಮನೆಗಳಿಗೂ ಮಳೆ ನೀರು ನುಗ್ಗಿದೆ. ಖಾಸಗಿ ಕಚೇರಿಗಳ ಕೆಳ ಮಹಡಿಗಳಲ್ಲಿಯೂ ನೀರು ತುಂಬಿಕೊಂಡಿದ್ದು, ಸಿಬ್ಬಂದಿ ಕಚೇರಿಗಳಿಗೆ ಹೋಗಲು ಹರಸಾಹಸ ಪಡಬೇಕಾಯಿತು.

ಸಾರ್ವಜನಿಕರ ಆಕ್ರೋಶ

ಪದೇ ಪದೇ ಮಳೆ ಅವಾಂತರಕ್ಕೆ ಸ್ಥಳೀಯ ನಿವಾಸಿಗಳು ಸುಸ್ತಾಗಿದ್ದು, ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ. ಬಿಬಿಎಂಪಿಯವರು ಈಗ ಬಂದಿದ್ದಾರೆ. ಕೋಟಿ ಕೋಟಿ ಹಣ ಇಟ್ಟಿದ್ದೇವೆ ಅಂತಾರೆ. ಇದೇನಾ ಇವರ ಕೆಲಸ. ಈ ರೀತಿ ಹಿಂಸೆ ಕೊಡುವ ಬದಲು ಸಾಯಿಸಿಬಿಡಿ. ಸಣ್ಣ ಮಳೆ ಬಂದರೂ ಇಡೀ ಮನೆ ಮುಳುಗುತ್ತಿದೆ. ತೆರಿಗೆ ಕಟ್ಟುತ್ತೇವೆ ಆದರೂ ಇಂತಹ ಸ್ಥಿತಿ ಇದೆ. ನಮ್ಮ ತಂದೆ ಆಸ್ಪತ್ರೆಯಲ್ಲಿದ್ದಾರೆ, ಇಲ್ಲಿ ನೋಡಿದರೆ ಹೀಗಾಗಿದೆ. ಇದೇನಾ ಗ್ರೇಟರ್ ಬೆಂಗಳೂರು? ಅಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇತ್ತ ಬನ್ನೇರುಘಟ್ಟ ಮುಖ್ಯರಸ್ತೆಯ ಮೈಕೋ ಲೇಔಟ್​ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಸುಮಾರು 15 ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಚರಂಡಿ ನೀರು ಹೊರಹಾಕಲು ಹರಸಾಹಸಪಡಬೇಕಾಯಿತು. ವರ್ತೂರಿನ ಕಪೂರ್​ ರೆಸಾರ್ಟ್​ ಬಳಿಯೂ ಸಾರ್ವಜನಿಕರು, ವಾಹನ ಸವಾರರು ಪರದಾಡಬೇಕಾಯಿತು. ದಿಢೀರ್ ಸುರಿದ ಮಳೆಗೆ ರಸ್ತೆಯಲ್ಲಿ ಮೂರ್ನಾಲ್ಕು ಅಡಿ ನೀರು ನಿಂತಿದ್ದು, ಹಲವು ಬೈಕ್​ಗಳು ನೀರಲ್ಲಿ ಮುಳುಗಿ ಹೋಗಿದ್ದವು.

ಬಾಣಸವಾಡಿ ಮತ್ತು ಇಂದಿರಾನಗರದಲ್ಲಿ ಗಾಳಿಮಳೆಗೆ ಮರ ಮುರಿದುಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅದೇ ರೀತಿ ಪುಟ್ಟೇನಹಳ್ಳಿಯ ಬಳಿ ಅಪಾರ್ಟ್‌ ಮೆಂಟ್‌ ವೊಂದರ ಆವರಣದ ಕಾಂಪೌಂಡ್ ಕುಸಿದಿದೆ. ಸಾಯಿ ಲೇಔಟ್‌ನಲ್ಲಿ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ಮನೆಗಳಿಗೆ ನುಗ್ಗಿ ಜಲಾವೃತಗೊಂಡಿದೆ. ಹೀಗೆ ಬಹುತೇಕ ಕಡೆ ಮನೆಯೊಳಗೆ ನೀರು ನುಗ್ಗಿ ರಾತ್ರಿಯಿಡೀ ನಿದ್ರೆ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಗಳಿಗೆ ನೀರು ನುಗ್ಗಿದ್ದರಿಂದ ಪೀಠೋಪಕರಣಗಳು, ದವಸ ಧಾನ್ಯಗಳು ಮಳೆ ನೀರಿಗೆ ಕೊಚ್ಚಿ ಹೋಗಿದ್ದು, ನೀರನ್ನು ಪಂಪ್‌ ಗಳ ಮೂಲಕ ಹೊರಹಾಕುತ್ತಿದ್ದ ದೃಶ್ಯಗಳು ಕಂಡುಬಂದವು.

ಎಲ್ಲೆಲ್ಲಿ ನೀರು?

* ಸಾಮಾಜಿಕ ಜಾಲತಾಣದಲ್ಲಿ ಮಳೆ‌ ನೀರು ಹಾಗೂ ಸಂಚಾರ ದಟ್ಟಣೆ ಕುರಿತು ಕ್ಷಣ ಕ್ಷಣ ಮಾಹಿತಿ ಹಂಚಿಕೊಳ್ಳುತ್ತಿರುವ ಸಂಚಾರ ಪೊಲೀಸರು, ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸಬೇಕೆಂದು ಮನವಿ ಮಾಡಿದ್ದಾರೆ.

* ಮಹಾದೇವಪುರ, ಬೆಂಗಳೂರು ಪೂರ್ವ ವಲಯ, ಬೊಮ್ಮನಹಳ್ಳಿ, ಯಲಹಂಕ ವಲಯದಲ್ಲಿ ಭಾರೀ ಮಳೆಯಾಗಿದ್ದು, 4 ವಲಯದ 100 ಕ್ಕೂ ಹೆಚ್ಚು ಪ್ರದೇಶಗಳಿಗೆ ಸಮಸ್ಯೆಯಾಗಿದೆ.

* ಶಾಂತಿನಗರ, ಕೋರಮಂಗಲ, ಬೊಮ್ಮನಹಳ್ಳಿಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ.

*ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ನಾಗವಾರ ವಾರ್ಡ್‌ನಲ್ಲಿ ನಿವಾಸಿಗಳು ರಾತ್ರಿ ನಿದ್ದೆಗೆಡಬೇಕಾಯಿತು.

* ಎಲೆಕ್ಟ್ರಾನಿಕ್‌ ಸಿಟಿ ಫ್ಲೈ ಓವರ್‌ನಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಸಂಚಾರವನ್ನು ಬಂದ್‌ ಮಾಡಲಾಗಿದೆ.

* ಚಾಮರಾಜಪೇಟೆಯ ಶಿರಸಿ ವೃತ್ತದ ಬಳಿ ದೊಡ್ಡ ಮರ ರಸ್ತೆಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ವಾಹನ ಸಿಲುಕಿಲ್ಲ, ಪ್ರಾಣಾಪಾಯವಾಗಿಲ್ಲ.

* ನಗರದ ಶಿವಾನಂದ ಸರ್ಕಲ್ ಅಂಡರ್ ಪಾಸ್ ಮುಳುಗಡೆಯಾಗಿದೆ.

ಜೆಸಿಬಿಯಲ್ಲಿ ಬಂದ ಶಾಸಕ..! 

ತೀವ್ರ ನೀರಿನ ನಡುವೆಯೂ, ಕೆಆರ್ ಪುರ ಶಾಸಕ ಬಿ. ಬಸವರಾಜ್ ಅವರು ಸೋಮವಾರ ಸಾಯಿ ಲೇಔಟ್‌ನ ಪ್ರದೇಶಕ್ಕೆ ಜೆಸಿಬಿಯಲ್ಲಿ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದರು.

ಎಷ್ಟು ಪ್ರಮಾಣ ಮಳೆ..!

ಕೆಂಗೇರಿ : 132 ಎಂಎಂ

ವದೇರಹಳ್ಳಿ : 131ಎಂಎಂ

ಚಿಕ್ಕಬಾಣಾವರ : 127ಎಂಎಂ

ಕೊಡತಿ : 125ಎಂಎಂ

ಸೋಮಶೆಟ್ಟಿಹಳ್ಲಿ : 121ಎಂಎಂ

ಮಾದನಾಯಕನಹಳ್ಳಿ : 119ಎಂಎಂ

ಮಾದಾವರ : 106ಎಂಎಂ

ಯಲಹಂಕ : 103ಎಂಎಂ

ಕೊಡಿಗೆಹಳ್ಳಿ : 100ಎಂಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News